ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಯ ಗುರುವಾರದ ಸಂತೆಯಲ್ಲಿ ಹುರುಳಿ ಬೆಲೆ ಕುಸಿದ ಪರಿಣಾಮ ರೈತರು ವ್ಯಾಪಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಳೆದ ವಾರದ ಸಂತೆಯಲ್ಲಿ ಕ್ವಿಂಟಾಲ್‌ಗೆ 6 ಸಾವಿರ ರೂ. ಇದ್ದ ಹುರುಳಿ ಬೆಲೆ ಈ ವಾರ ಮೈಸೂರು ಮಾರುಕಟ್ಟೆಯಲ್ಲಿ 5150 ಕ್ಕೆ ನಿಗದಿಯಾಗಿದ್ದರೂ ಇಲ್ಲಿ 4 ಸಾವಿರಕ್ಕೂ ಖರೀದಿಸಲು ಮುಂದಾಗದಿರುವುದು ಬೆಳೆಗಾರರನ್ನು ಕೆರಳಿಸಿತು. ಈ ಬಾರಿ ಅತಿ ಹೆಚ್ಚಿನ ಮಳೆ ಬಿದ್ದಿದ್ದರಿಂದ ಎಲ್ಲ ಬೆಳೆಗಳೂ ನಾಶವಾಗಿದ್ದು, ಸದ್ಯ ಜೀವನೋಪಾಯಕ್ಕೆ ಹುರುಳಿ ಒಂದೇ ಆಧಾರವಾಗಿದೆ. ಇಂಥ ಸಂದರ್ಭದಲ್ಲಿ ವ್ಯಾಪಾರಿಗಳು ಅಡ್ಡಾದಿಡ್ಡಿ ಬೆಲೆಗೆ ಖರೀದಿಸುವ ಸಲುವಾಗಿ ಹರಾಜು ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಹುರುಳಿ ಕಟಾವು ಆರಂಭವಾಗಿದ್ದರೂ ಆರಂಭದಲ್ಲಿಯೇ ಕಡಿಮೆ ಬೆಲೆ ನಿಗದಿಪಡಿಸಲು ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಬೆಳೆಗಳನ್ನು ಸಂತೆಯಲ್ಲಿ ಮಾರಾಟ ಮಾಡದೆ, ಕಾರ್ಮಿಕರಿಗೆ ಕೂಲಿ ಕೊಡಲೂ ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಟ್ರೇಡ್ ಲೈಸೆನ್ಸ್ ಪಡೆದಿರುವ ವ್ಯಾಪಾರಿಗಳು ಖರೀದಿಗೆ ಮುಂದಾಗದಿದ್ದರೆ ಅಂಥವರ ಪರವಾನಗಿ ರದ್ದುಗೊಳಿಸಿ ಎಂದು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ನಿರ್ದೇಶಕ ಮಹೇಶ್, ಅಧಿಕಾರಿಗಳಾದ ಎ.ಎಲ್.ಮಹೇಶ್ ಹಾಗೂ ರವೀಶ್ ಟ್ರೇಡ್ ಲೈಸೆನ್ಸ್ ಪಡೆದಿರುವ ವರ್ತಕರ ಸಭೆ ನಡೆಸಿ ಕ್ವಿಂಟಾಲ್ ಹುರುಳಿಯನ್ನು 5300 ರೂ.ಗೆ ಖರೀದಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಬಿಟ್ಟರು.