ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಮಕ್ಕಳ ಸಂತೆ ನಡೆಯಿತು. 1ನೇ ತರಗತಿ ವಿದ್ಯಾರ್ಥಿಗಳು ಹಣ್ಣುಗಳನ್ನು ಮಾರಾಟ ಮಾಡಿ ಗಮನ ಸೆಳೆದರು.
ಕಿತ್ತಳೆ, ಸೇಬು, ದ್ರಾಕ್ಷಿ, ಸಪೋಟ, ಸೀತಾಫಲ, ಅನಾನಸ್, ಪಪ್ಪಾಯ, ಪೇರಲ, ಬಾಳೆ, ಕಿವಿ ಹಣ್ಣುಗಳು ನಮ್ಮ ಬಳಿ ಇವೆ. ಬೇಗ ಬನ್ನಿ ಎಂದು ಗ್ರಾಹಕರನ್ನು ಸೆಳೆದರು.
ಮಾರುಕಟ್ಟೆಯಲ್ಲಿ ಹೇಗೆ ವ್ಯಾಪಾರ ನಡೆಸಬೇಕು, ಗ್ರಾಹಕರ ಜತೆ ಹೇಗೆ ವ್ಯವಹರಿಸಬೇಕು ಎಂಬುದರ ತಿಳಿವಳಿಕೆ ಮೂಡಿಸಲು ಸಂತೆ ಕಾರ್ಯಕ್ರಮ ಅನುಕೂಲವಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಆಲೋಚನಾ ಶಕ್ತಿ ಬೆಳೆಯುತ್ತದೆ ಎಂದು ತಿಳಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವಿಶ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪಾಠ ಜ್ಞಾನಾರ್ಜನೆ ನೀಡಿದರೆ, ಅನುಭವ ಕಲಿಸುವ ಪಾಠ ಜೀವನಕ್ಕೆ ಉಪಯುಕ್ತ ಎಂದರು.
ಸಂಸ್ಥೆ ನಿರ್ದೇಶಕಿ ಪಿ.ಸಿ. ಸುನಿತಾ, ಐಸಿಎಎಸ್‌ಇ ಪ್ರಾಚಾರ್ಯ ಪಿ. ಬಸವರಾಜಯ್ಯ, ಉಪ ಪ್ರಾಚಾರ್ಯ ಬಿ. ಅವಿನಾಶ್ ಮುಖ್ಯ ಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಇತರರು ಇದ್ದರು.