ಬೆಳಗಾವಿ: ಇಲ್ಲಿನ ಹ್ಯೂಮ್ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ಜರುಗಿದ ಸಸ್ಯ ಸಂತೆಯಲ್ಲಿ ಮಾವು, ಪೇರು, ಕಿತ್ತಳೆ, ಗುಲಾಬಿ, ವಿವಿಧ ಜಾತಿಯ ಹಣ್ಣು, ಹೂಗಳು ಸೇರಿ ಬರೋಬ್ಬರಿ 40 ಸಾವಿರ ಸಸಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ನಗರದ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ಸಸ್ಯ ಸಂತೆಯಲ್ಲಿ ಬೆಳಗಾವಿ ಮಹಾನಗರ, ಗೋಕಾಕ, ಬೈಲಹೊಂಗಲ, ಕಿತ್ತೂರು, ಹುಕ್ಕೇರಿ, ವಿವಿಧ ಭಾಗಗಳಿಂದ ಗೃಹಿಣಿಯರು, ರೈತರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸೇರಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಜನರು ಸಸ್ಯ ಸಂತೆ ವೀಕ್ಷಣೆ ಮಾಡಿದ್ದಾರೆ. ಕಳೆದ ಸಾಲಿನ ಸಸ್ಯ ಸಂತೆಗೆ ಹೋಲಿಕೆ ಮಾಡಿದರೆ ವೀಕ್ಷಕರ ಸಂಖ್ಯೆ ಶೇ.15 ಹೆಚ್ಚಳವಾಗಿದೆ.
ಸಸ್ಯ ಸಂತೆಯಲ್ಲಿ ಬಿಳಿ ನೇರಳೆ, ಗುಲಾಬಿ, ಸೇವಂತಿ, ಮಾವು, ಪೇರು, ಸೇಬು, ಕಿತ್ತಳೆ ಸೇರಿ ಬರೋಬ್ಬರಿ 1 ಲಕ್ಷ ಸಸಿ ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೆ, ಜಪಾನ್ ದೇಶದ ಮೂಲದ ಮಿಯಾಜಾಕಿ ತಳಿಯ ಮಾವಿನ ಹಣ್ಣಿನ ಎರಡು ಸಸಿಗಳು, ಹತ್ತು ಬಗೆಯ ಅಲಂಕಾರಿಕ ಹೂವು ಪ್ರದರ್ಶನಕ್ಕೆ ಇಟ್ಟಿರುವುದು ಸಸ್ಯ ಸಂತೆಯ ವಿಶೇಷವಾಗಿತ್ತು.
ಗುಣಮಟ್ಟದ ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳು, ತಾಳೆ ಗಿಡಗಳು, ಅಣಬೆ ಸಸಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಅಲ್ಲದೆ, ಅಣಬೆ, ಜೇನು ಉತ್ಪನ್ನಗಳು, ಬೆಳಗಾವಿಯಲ್ಲಿ ಉತ್ಪಾದಿಸಿದ ವಿವಿಧ ಜೈವಿಕ ಗೊಬ್ಬರ ರೋಗ ಮತ್ತು ಕೀಟನಾಶಕ ಹಾಗೂ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಎರೆಹುಳು ಗೊಬ್ಬರ ಹೆಚ್ಚು ಮಾರಾಟವಾದವು.
ಈ ಬಾರಿ ಸಸ್ಯ ಸಂತೆಯಲ್ಲಿ 10 ಸಾವಿರಕ್ಕೂ ಅಧಿಕ ಹೂವಿನ ಸಸಿಗಳು ಮಾರಾಟವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಿವಾಸಿಗಳು ಖರೀದಿಸಿದ್ದಾರೆ. ಕೆಲವು ರೈತರು ಹೂವಿನ ಸಸಿಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯ ಹಲವು ಭಾಗಗಳಿಂದ ತರಿಸಲಾಗಿದ್ದ ವಿವಿಧ ಮಾದರಿಯ ಸಸಿಗಳನ್ನು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.