ಜಿಲ್ಲೆ

ಸಂತೆ ವ್ಯಾಪಾರಿಗಳಿಗಿಲ್ಲ ಸೂಕ್ತ ವ್ಯವಸ್ಥೆ

ಆಲೂರು: ಪ್ರತಿ ಬುಧವಾರ ಪಟ್ಟಣದಲ್ಲಿ ನಡೆಯುವ ವಾರದ ಸಂತೆ ತಾಲೂಕಿನಲ್ಲಿ ಅತಿ ದೊಡ್ಡ ಸಂತೆ ಎಂದು ಪ್ರಸಿದ್ಧಿ ಪಡೆದಿದೆ. ಆದರೆ ಸಂತೆಗೆ ಬರುವ ವರ್ತಕರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲ ಹಾಗೂ ಬೇಸಿಗೆಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ವ್ಯಾಪಾರ ಮಾಡಬೇಕಾದ ದುಸ್ಥಿತಿ ಇದೆ.


ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಬುಧವಾರವೂ ಮಳೆ ಮುಂದುವರಿದಿದ್ದರಿಂದ ವಾರದ ಸಂತೆ ಅಸ್ತವ್ಯಸ್ತಗೊಂಡಿತ್ತು. ಸಂತೆ ನಡೆಯುವ ಸ್ಥಳ ಕೆಸರುಮಯವಾದ್ದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡಿದರು. ಮಳೆಯಿಂದ ಜನಸಂದಣಿಯೂ ಕಡಿಮೆಯಿತ್ತು. ಸಂತೆ ದಿನದಂದು ಮಾತ್ರ ನಡೆಯುವ ನಾಟಿಕೋಳಿ, ಬೆಣ್ಣೆ ವ್ಯಾಪಾರ ಗ್ರಾಹಕರಿಲ್ಲದೆ ಮಂಕಾಗಿತ್ತು.

ವಾರದ ಸಂತೆ ದಿನ ಮಳೆ ಇದ್ದರೆ ಅಂದು ವ್ಯಾಪಾರ ಅಷ್ಟಕಷ್ಟೇ. ತರಕಾರಿ, ಸೊಪ್ಪು ಉಳಿದರೆ ಮಳೆ ನೀರು ಮಿಶ್ರಿತವಾಗಿ ಹಾಳಾಗಿರುತ್ತವೆ. ಒಟ್ಟಾರೆ ವರ್ತಕರು ನಷ್ಟ ಅನುಭವಿಸುವಂತಾಗುತ್ತದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಇರ್ಫಾನ್.