ಆನಂದ ಅಂಗಡಿ ಹುಬ್ಬಳ್ಳಿ
ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುವ ಹುಬ್ಬಳ್ಳಿಯ ಬೆಂಗೇರಿ ಮತ್ತು ಉಣಕಲ್ಲ ಸಂತೆ ಮೈದಾನಗಳು ಇನ್ನೊಂದು ವರ್ಷದಲ್ಲಿ ‘ಸ್ಮಾರ್ಟ್’ ಆಗಿ ಕಂಗೊಳಿಸಲಿವೆ.
ಜನತಾ ಬಜಾರ, ಎಂ.ಜಿ. ಮಾರ್ಕೆಟ್ನಲ್ಲಿ ಹೆಚ್ಚುತ್ತಿರುವ ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ಸ್ಮಾರ್ಟ್ಸಿಟಿ ಯೋಜನೆಯಡಿ ಈ ಎರಡೂ ಸಂತೆ ಮೈದಾನಗಳನ್ನು ನವೀಕರಿಸಲು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ಸಿಟಿ ಕಂಪನಿ ಮುಂದಾಗಿದೆ.
ಸುಮಾರು 12,700 ಚದರ್ ಮೀಟರ್ ವಿಸ್ತೀರ್ಣದ ಬೆಂಗೇರಿ ಸಂತೆ ಮೈದಾನವನ್ನು 6.70 ಕೋಟಿ ರೂ. ವೆಚ್ಚದಲ್ಲಿ ಹಾಗೂ ಸುಮಾರು 668 ಚ.ಮೀಟರ್ ವಿಸ್ತೀರ್ಣದ ಉಣಕಲ್ಲ ಸಂತೆ ಮೈದಾನವನ್ನು 2.10 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲು ಯೋಜನೆ ರೂಪಿಸಲಾಗಿದೆ.
ಈ ಎರಡೂ ಮೈದಾನಗಳಲ್ಲಿ ಪ್ರತಿ ಶನಿವಾರ ಸಂತೆ ನಡೆಯುತ್ತಿದೆ. ಮೈದಾನ ನವೀಕರಣಗೊಂಡ ನಂತರ ವಾರಕ್ಕೆ ಎರಡು ಬಾರಿ ಹಾಗೂ ನಂತರದ ದಿನಗಳಲ್ಲಿ ನಿತ್ಯ ಸಂತೆ ನಡೆಯುವ ನಿರೀಕ್ಷೆ ಇದೆ.
ಎರಡೂ ಸಂತೆ ಮೈದಾನಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು 12 ತಿಂಗಳ ಅವಧಿ ನೀಡಲಾಗಿದೆ. ನವೀಕೃತ ಸಂತೆ ಮೈದಾನಗಳಲ್ಲಿ 5 ವರ್ಷಗಳ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರದ್ದೇ ಆಗಿರಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಸುರಿದಲ್ಲಿ ಈ ಎರಡೂ ಸಂತೆ ಮೈದಾನದಲ್ಲಿ ಕಾಲಿಡುವುದು ಕಷ್ಟಕರ. ಅಂತಹದರಲ್ಲಿಯೇ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು ಸಂತೆಗಾಗಿ ಬರುತ್ತಾರೆ.
ಈ ಸಂತೆ ಮೈದಾನಗಳು ನವೀಕೃತಗೊಂಡಲ್ಲಿ ಕೆಳಭಾಗದಲ್ಲಿ ಸಂಪೂರ್ಣ ಸಿಮೆಂಟ್ ರಸ್ತೆ ನಿರ್ವಿುಸಿ, ಮೇಲ್ಭಾಗದಲ್ಲಿ ಮಳೆ ನೀರು ಮೈದಾನದಲ್ಲಿ ಬೀಳದಂತೆ ಹಾಗೂ ಬಿಸಿಲು, ಧೂಳು, ಗಾಳಿಯಿಂದ ರಕ್ಷಣೆ ಪಡೆಯುವುದಕ್ಕಾಗಿ ಛಾವಣಿ ನಿರ್ವಿುಸಲಾಗುತ್ತದೆ. ತರಕಾರಿ, ಹಣ್ಣು, ಹೂವುಗಳ ಮಾರಾಟಕ್ಕಾಗಿ ಪ್ರತ್ಯೇಕ ಕಟ್ಟೆಗಳ ನಿರ್ಮಾಣ ಮಾಡಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಸ್ನಾನಗೃಹ, ಪ್ರತ್ಯೇಕ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂತೆ ನಡೆಯದ ಸಮಯದಲ್ಲಿ ಸಾರ್ವಜನಿಕರು ಇಲ್ಲಿ ವಾಯು ವಿಹಾರಕ್ಕೆ ಬರಬಹುದು. ಕಟ್ಟೆಗಳ ಮೇಲೆ ಯೋಗಾಭ್ಯಾಸ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.
2 ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದೆ 58 ಯೋಜನೆ: ಹು-ಧಾ ಸ್ಮಾರ್ಟ್ಸಿಟಿ ಕಂಪನಿ ಸ್ಮಾರ್ಟ್ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ 58 ವಿವಿಧ ಯೋಜನೆಗಳು ಮುಂದಿನ 2 ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿದೆ. ಕೇಂದ್ರ ಸರ್ಕಾರದಿಂದ ಇದುವರೆಗೆ 196 ಕೋಟಿ ರೂ. ಹಾಗೂ ರಾಜ್ಯದಿಂದ 190 ಕೋಟಿ ರೂ. ಸೇರಿ ಒಟ್ಟು 386 ಕೋಟಿ ರೂ. ಬಿಡುಗಡೆಗೊಂಡಿದೆ. ಇದುವರೆಗೆ 70 ಕೋಟಿ ರೂ.ಗಳಷ್ಟೇ ಖರ್ಚಾಗಿದೆ. ಸ್ಮಾರ್ಟ್ಸಿಟಿ ಯೋಜನೆಯಡಿ ಈಜುಗೊಳ ಅಭಿವೃದ್ಧಿಗೆ 3.03 ಕೋಟಿ ರೂ., ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್ಹೆಲ್ತ್ ಯೋಜನೆಗೆ 3.06 ಕೋಟಿ ರೂ., ಲ್ಯಾಮಿಂಗ್ಟನ್ ಶಾಲೆಯಲ್ಲಿ ಸ್ಥಾಪಿಸಿದ ಸ್ಮಾರ್ಟ್ಸ್ಕೂಲ್ ಯೋಜನೆಗೆ 1.17 ಕೋಟಿ ರೂ. ವ್ಯಯಿಸಲಾಗಿದೆ. ಈ ಎಲ್ಲ ಯೋಜನೆಗಳು ಪೂರ್ಣಗೊಂಡಿವೆ. 4.59 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಗಾಜಿನಮನೆ ಆವರಣದಲ್ಲಿ ಬಹುವಾಹನ ನಿಲುಗಡೆ ಯೋಜನೆ, 4.20 ಕೋಟಿ ರೂ.ಗಳಲ್ಲಿ ್ಲ ಪುಟಾಣಿ ರೈಲು ಯೋಜನೆ, 31.38 ಕೋಟಿ ರೂ.ಗಳಲ್ಲಿ ಗೋಕುಲ ರಸ್ತೆಯ ರೇಣುಕಾ ನಗರದಲ್ಲಿ 3.7 ಕಿಮೀ ರಸ್ತೆ ಅಭಿವೃದ್ಧಿ, 37.71 ಕೋಟಿ ರೂ.ಗಳಲ್ಲಿ ಮಂಜುನಾಥ ನಗರದಲ್ಲಿ 3.9 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ.
ಉದ್ಘಾಟನೆ ಇಂದು: ಜ. 5ರಂದು ಸಂಜೆ 4.30ಕ್ಕೆ ಹುಬ್ಬಳ್ಳಿ ಈಜುಗೊಳ ಆವರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಮಾರ್ಟ್ ಸಿಟಿ ಯೋಜನೆಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಮಂತ್ರಿ ಜಗದೀಶ ಶೆಟ್ಟರ್ ಹಾಗೂ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.
ಇನ್ನೂ 7 ಕಾಮಗಾರಿಗಳಿಗೆ ಟೆಂಡರ್ ಕರೆದರೆ ಶೇ. 100ರಷ್ಟು ಟೆಂಡರ್ ಕರೆದಂತಾಗುತ್ತದೆ. ಒಂದೆರಡು ಕಾಮಗಾರಿಗಳನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲವೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. | ಎಸ್.ಎಚ್. ನರೇಗಲ್, ಹು-ಧಾ ಸ್ಮಾರ್ಟ್ಸಿಟಿ, ಕಂಪನಿ ವಿಶೇಷ ಅಧಿಕಾರಿ