ಮೂಡಿಗೆರೆ ಸಂತೆ ಮೈದಾನದಲ್ಲಿ ವಿವಿಧ ಬಗೆಯ ಸರಕುಗಳ ವ್ಯಾಪಾರಕ್ಕಾಗಿ ಲಕ ಅಳವಡಿಸುವ ಕಾರ್ಯವನ್ನು ಪಪಂ ಅಧ್ಯಕ್ಷ ಕೆ.ವೆಂಕಟೇಶ್ ವೀಕ್ಷಿಸಿದರು. ರಮೇಶ್, ಹಂಜಾ, ಇರ್ಷಾಧ್ ಇತರರಿದ್ದರು. 
ಜಿಲ್ಲೆ

ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಜಾಗ ನಿಗದಿ

ಎಸ್.ಎನ್.ರವೀಂದ್ರ

ಮೂಡಿಗೆರೆ: ಪಟ್ಟಣದ ವಿದ್ಯಾನಗರದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ಜನರಿಗೆ ಅನುಕೂಲವಾಗಬೇಕೆಂಬ ದಷ್ಟಿಯಿಂದ ಕೆಲ ಬದಲಾವಣೆ ತರಲಾಗಿದೆ ಎಂದು ಪಪಂ ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.

ಗುರುವಾರ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸರಕುಗಳ ಮಾರಾಟದ ಮಳಿಗೆಗಳ ನಿರ್ದಿಷ್ಟ ಸ್ಥಳದ ಲಕ ಅಳವಡಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಾರದ ಸಂತೆ ನಡೆಯುವ ಸಮಯದಲ್ಲಿ ಪಟ್ಟಣದಿಂದ ವಿದ್ಯಾನಗರದವರೆಗೆ ವ್ಯಾಪಾರಸ್ಥರು ವಿವಿಧ ಸರಕು ಸಾಮಗ್ರಿಗಳನ್ನು ತಂದು ರಸ್ತೆ ಬದಿಯಲ್ಲಿಯೇ ಹಾಕಿ ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ಕಿರಿಕಿರಿ ಉಂಟಾಗುತ್ತಿದೆ. ಹಾಗಾಗಿ ಸಂತೆ ವ್ಯಾಪಾರಕ್ಕೆ ಕೆಲ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.

ಎಲ್ಲೆಂದರಲ್ಲಿ ವ್ಯಾಪಾರ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ತರಕಾರಿ, ದಿನಸಿ, ಹಸಿ ಮತ್ತು ಒಣ ಮೀನು, ಹಣ್ಣು, ಬಟ್ಟೆ ವ್ಯಾಪಾರ ಒಂದೇ ಕಡೆ ಗ್ರಾಹಕರಿಗೆ ಸಿಗುವಂತೆ ಎಲ್ಲ ಕಡೆ ಲಕ ಅಳವಡಿಸಲಾಗಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವ್ಯಾಪಾರಿಗಳೂ ತಿರುಗಾಡುವ ದಾರಿಯಲ್ಲಿ ತೊಂದರೆಯಾಗುವಂತೆ ಅಂಗಡಿ ತೆರೆಯದೆ ನಿಗದಿ ಪಡಿಸಿರುವ ಸ್ಥಳದಲ್ಲಿಯೇ ವ್ಯಾಪಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪಪಂ ಉಪಾಧ್ಯಕ್ಷ ರಮೇಶ್, ಸದಸ್ಯ ಹಂಜಾ, ಇಂಜಿನಿಯರ್ ಇರ್ಷಾಧ್ ಇತರರಿದ್ದರು.