ಜಿಲ್ಲೆ

ಸಂತೃಪ್ತಿಯ ಬದುಕಿಗೆ ಧರ್ಮವೇ ಮೂಲ

Chikkamagaluru

ಬಾಳೆಹೊನ್ನೂರು: ಮನುಷ್ಯ ಸುಖ ಬಯಸುವುದು ಸಹಜ. ಆದರೆ ಆ ದಾರಿಯಲ್ಲಿ ನಡೆಯುವುದು ಬಲು ಮುಖ್ಯ. ಶಾಂತಿ, ಸಂತೃಪ್ತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಅರಿಯಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಗುರುವಾರ ಶ್ರಾವಣ ಮಾಸದ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಬದುಕು ಬಲಗೊಳ್ಳಲು ಆಚಾರ-ವಿಚಾರ ಎರಡೂ ಮುಖ್ಯ. ಮನುಷ್ಯ ಜೀವನದಲ್ಲಿ ಸತ್ಯ, ಧರ್ಮ, ಕರ್ತವ್ಯ ಮತ್ತು ಶೀಲವೇ ಉಸಿರಾಗಬೇಕು. ಏನೆಲ್ಲ ಸಂಪತ್ತು ಗಳಿಸಿದರೂ ಮಾನವನಿಗೆ ಶಾಂತಿ ಮುಖ್ಯ. ಜೀವನದಲ್ಲಿ ಆದರ್ಶ ಗುರಿ ಮತ್ತು ಗುರುವನ್ನು ಆಶ್ರಯಿಸಿ ನಡೆದರೆ ಉನ್ನತಿ ಕಾಣಬಹುದು. ತನ್ನಂತೆ ಇತರರೂ ಸುಖವಾಗಿ ಬಾಳಬೇಕೆಂಬ ಉದಾತ್ತ ಮನೋಭಾವ ಬೆಳೆದುಬಂದರೆ ಈ ಭೂಮಿ ಸ್ವರ್ಗವಾಗುವುದರಲ್ಲಿ ಅನುಮಾನವಿಲ್ಲ. ಈ ದೇಹ ಭಗವಂತನಿರುವ ಗುಡಿ. ಗುಡಿಯಲ್ಲಿ ದೇವರಿದ್ದರೆ ಬೆಲೆ-ನೆಲೆ ಉಂಟು. ಇಲ್ಲದಿದ್ದರೆ ಏನೂ ಇಲ್ಲ. ಧರ್ಮದ ದಿಕ್ಸೂಚಿಯಲ್ಲಿ ಮನುಷ್ಯ ಬಾಳಿ ಬದುಕಬೇಕೆಂಬುದು ಜಗದ್ಗುರು ರೇಣುಕಾಚಾರ್ಯರ ಬೋಧನೆಯಾಗಿತ್ತು ಎಂದರು. ಇದೇ ಸಂದರ್ಭದಲ್ಲಿ ಆಗಸ್ಟ್ ತಿಂಗಳ ರಂಭಾಪುರಿ ಬೆಳಗು ಬಿಡುಗಡೆ ಮಾಡಿದರು.

ಪುರಾಣ ಪ್ರವಚನ ಮಾಡಿದ ಗಂವ್ಹಾರ ಹಿರೇಮಠದ ವಿರೂಪಾಕ್ಷ ಶ್ರೀಗಳು ಮಾತನಾಡಿ ಲೋಕಕಲ್ಯಾಣ ಮತ್ತು ಮಾನವ ಕಲ್ಯಾಣದ ಗುರಿಯಿಟ್ಟು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರಂತರ ಶ್ರಮಿಸಿದರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ ಬಹು ಮುಖ್ಯವೆಂದು ಸಾರಿದ್ದನ್ನು ಮರೆಯಬಾರದು ಎಂದರು.