ಹನೂರು: ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಇಡೀ ರಾತ್ರಿ ಜೋರು ಮಳೆ ಸುರಿದ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸ ವ್ಯಕ್ತವಾಗಿರುವುದು ಒಂದೆಡೆಯಾದರೆ, ಹನೂರಿನಲ್ಲಿ ಮನೆಯ ಗೋಡೆ ಕುಸಿದಿದೆ, ಒಡೆಯರಪಾಳ್ಯದಲ್ಲಿ ಚರಂಡಿ ನೀರು ಮನೆಗೆ ನುಗ್ಗಿದೆ, ಎಂ.ಟಿ.ದೊಡ್ಡಿಯಲ್ಲಿ ರಾಗಿ ಫಸಲು ಸಂಪೂರ್ಣ ನೆಲಕಚ್ಚಿದ್ದು ಅವಾಂತರ ಸೃಷ್ಟಿಸಿದೆ.
ತಾಲೂಕಿನಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಮುಸುಕಿನಜೋಳ ಹಾಗೂ ರಾಗಿಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದರು. ಆದರೆ ಕಳೆದ 25 ದಿನದ ಹಿಂದೆ ಮಳೆಯಾಗಿರಲಿಲ್ಲ. ಇದರಿಂದ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗಿ ಹೋಗಿದ್ದವು. ಆದರೆ ಕಳೆದ ವಾರದ ಹಿಂದೆ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಪೈರುಗಳಿಗೆ ಜೀವಕಳೆ ಬಂದಿದೆ. ಕೆರೆ, ಕಟ್ಟೆ ಹಾಗೂ ಹಳ್ಳಕೊಳ್ಳಗಳಲ್ಲಿ ನೀರು ಹರಿದಿದೆ.
ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಏರಿಕೆಯಾಗಿದೆ. ಇದರಿಂದ ರೈತರಲ್ಲಿ ಕೊಂಚ ನೆಮ್ಮದಿ ತಂದಿತ್ತು. ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಇದೀಗ ತಾಲೂಕಿನ ಬಹುತೇಕ ಕಡೆಗಳಲ್ಲಿ ರಾತ್ರಿ 11ರಲ್ಲಿ ಆರಂಭವಾದ ಜೋರು ಮಳೆ ಮುಂಜಾನೆ 5 ರವರೆಗೆ ಎಡೆಬಿಡದೆ ಸುರಿಯಿತು. ಇದರಿಂದ ಕೆಲವು ಜಲಾಶಯಗಳು ಭರ್ತಿಗೊಂಡರೆ, ಹಳ್ಳಕೊಳ್ಳಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಕೆರೆ, ಕಟ್ಟೆಗಳಲ್ಲೂ ನೀರು ಸಂಗ್ರಹವಾಗಿದೆ. ಚೆಕ್‌ಡ್ಯಾಂಗಳಲ್ಲಿ ನೀರು ನಿಲ್ಲುವಂತಾಗಿದೆ. ಹಾಗಾಗಿ ರಾತ್ರಿ ಸುರಿದ ಮಳೆ ಈ ಭಾಗದಲ್ಲಿ ಕೃಷಿಗೆ ಅನುಕೂಲವಾಗಿದ್ದು, ರೈತಾಪಿ ವರ್ಗದಲ್ಲಿ ಸಂತಸ ವ್ಯಕ್ತವಾಗಿದೆ.
ಅವಾಂತರ ಸೃಷ್ಟಿ: ರಾತ್ರಿ ಸುರಿದ ಜೋರು ಮಳೆ ರೈತರಿಗೆ ಖುಷಿ ನೀಡಿದರೆ, ಕೆಲವೆಡೆ ಅವಾಂತರ ಸೃಷ್ಟಿಸಿದೆ. ತಾಲೂಕಿನ ಒಡೆಯರಪಾಳ್ಯದಲ್ಲಿ ಮುಖ್ಯರಸ್ತೆಯ ಬದಿಯಲ್ಲಿರುವ ಜಡೇರುದ್ರಸ್ವಾಮಿ ಅವರ ಮನೆಗೆ ಚರಂಡಿ ಕೊಳಚೆ ನೀರು ಮನೆಗೆ ನುಗ್ಗಿದ್ದು, ಕುಟುಂಬಸ್ಥರು ನೀರನ್ನು ಹೊರಹಾಕಲು ಪರದಾಡಿದರು. ಹನೂರಿನಲ್ಲಿ ರಾಜಮ್ಮ ಹಾಗೂ ಪುತ್ರ ಕೆಂಪರಾಜು ಅವರು ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕೆಲ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಉಂಟಾಗಿರುವ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರಾಜಮ್ಮ ಒತ್ತಾಯಿಸಿದ್ದಾರೆ.
ಎಂ.ಟಿ.ದೊಡ್ಡಿಯಲ್ಲಿ ಶ್ರೀನಿವಾಸ್ ಅವರು ಸಾವಯವ ಕೃಷಿ ಪದ್ಧತಿಯಲ್ಲಿ ಒಂದು ಎಕರೆಯಲ್ಲಿ ಸಮೃದ್ಧಿಯಾಗಿ ಬೆಳೆದಿದ್ದು, ಕಟಾವಿನ ಹಂತಕ್ಕೆ ಬಂದಿದ್ದ ರಾಗಿ ಫಸಲು ಜೋರು ಮಳೆಯಿಂದಾಗಿ ಸಂಪೂರ್ಣ ನೆಲಕಚ್ಚಿದ್ದು, ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವಂತೆ ಅವರು ಒತ್ತಾಯಿಸಿದ್ದಾರೆ.
ಸೇತುವೆ ಮೇಲೆ ಹರಿದ ನೀರು: ಜೋರು ಮಳೆ ಸುರಿದ ಹಿನ್ನೆಲೆಯಲ್ಲಿ ಪಟ್ಟಣದ ಸ್ವಾಮಿಹಳ್ಳದಲ್ಲಿ ಯಥೇಚ್ಛವಾದ ನೀರು ಹರಿಯಿತು. ಇದರಿಂದ ಚಿಂಚಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ನಿರ್ಮಿಸಿರುವ ಕಿರು ಸೇತುವೆ ಮೇಲೆ ಬೆಳಗ್ಗೆ 11 ಗಂಟೆಯ ತನಕವೂ ನೀರು ಹರಿಯಿತು. ಇದರಿಂದ ಜಮೀನುಗಳಿಗೆ ತೆರಳುವ ರೈತರು, ಕೆಲಸ ಕಾರ್ಯಗಳ ನಿಮಿತ್ತ ತೆರೆಳುತ್ತಿದ್ದ ಸಾರ್ವಜನಿಕರು ಹಾಗೂ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸಲು ತುಂಬಾ ತೊಂದರೆ ಅನುಭವಿಸಿದರು, ಬೈಕ್ ಸವಾರರು ಸಂಚರಿಸಲು ಹರಸಾಹಸಪಟ್ಟರು.
ರಸ್ತೆಯ ಗುಂಡಿಗಳಲ್ಲಿ ನಿಂತ ನೀರು:
ತಾಲೂಕಿನಲ್ಲಿ ಮುಖ್ಯವಾಗಿ ಬಂಡಳ್ಳಿ ರಸ್ತೆ ಹಾಗೂ ನಾಲ್‌ರೋಡ್ ರಸ್ತೆಯ ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಂಪೂರ್ಣ ಹದಗೆಟ್ಟಿದೆ. ಹಾಗೆಯೇ ಪಟ್ಟಣದ ಲೊಕ್ಕನಹಳ್ಳಿ ರಸ್ತೆ, ಎಸ್‌ಬಿಎಂ ರಸ್ತೆ ಹಾಳಾಗಿದೆ. ಇದರಿಂದ ರಾತ್ರಿ ಸುರಿದ ಮಳೆಗೆ ಗುಂಡಿಗಳಲ್ಲಿ ನೀರು ನಿಲ್ಲುವಂತಾಯಿತು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗದ ಕೆಲವು ಗ್ರಾಮದ ಬೀದಿಗಳ ಗುಂಡಿಗಳಲ್ಲೂ ನೀರು ನಿಂತಿತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸಿದರು.