ಬಾಗಲಕೋಟೆ ನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ೫೩೫ ನೇ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಶಿಷ್ಠ ಮುನಿಗಳು, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ಕುರುಬ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ನಿವೃತ್ತ ಕೃಷಿ ಅಧಿಕಾರಿ ಹನುಮಂತ ಭೀಮಪ್ಪ ಗೊರವರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಇತರರು ಇದ್ದರು. 
ಜಿಲ್ಲೆ

ಸಂತರ ದೃಷ್ಠಿಯಲ್ಲಿ ಮಾನವ ಕುಲ ಒಂದೇ

ಬಾಗಲಕೋಟೆ: ಶರಣರು, ದಾಸರು, ಸಂತರು ಮಾನವ ಕುಲ ಒಂದೇ ಎಂದು ಸಾರಿದ್ದಾರೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು. ಅದರಂತೆ ವಚನಗಳ ಮೂಲಕ ಬಸವಣ್ಣನವರು ಹಾಗೂ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಮಾನವಕುಲ ಒಂದೇ ಆಗಿರುತ್ತದೆ ಜಾಗೃತಿ ಮೂಡಿಸಿದ ಶ್ರೇಷ್ಠರು ಎಂದು ಜಿಲ್ಲಾಽಕಾರಿ ಪಿ.ಸುನೀಲಕುಮಾರ ಹೇಳಿದರು.
ನಗರದ ಕಲಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ೫೩೫ ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳ ಹಿಂದೆಯೇ ಸಂತ ಮಹನೀಯರು ಮಾನವ ಕುಲ ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ. ೧೨ನೇ ಶತಮಾನದ ಬಸವಣ್ಣನವರಿಂದ ಹಿಡಿದು ಅಂಬೇಡ್ಕರರವರೆಗೂ ಅವರು ಸಮಾನತೆಯ ಬಗ್ಗೆಯೇ ಹೇಳಿರುತ್ತಾರೆ. ಸಮುದಾಯಗಳ ಮಧ್ಯೆ ತಾರತಮ್ಯವಿಲ್ಲದಂತೆ ಬದುಕಬೇಕು. ಸಂತರ ಜಯಂತಿಗಳನ್ನು ಅದ್ಧೂರಿಯಾಗಿ ಆಚರಿಸುವುದು ಅಷ್ಟೇ ಅಲ್ಲ. ಶ್ರದ್ದೆಯಿಂದ ತತ್ವಾದರ್ಶಗಳನ್ನು ಪಾಲನೆ ಮಾಡುವುದು ಬಹಳ ಮುಖ್ಯ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಡಾ.ಎಫ್.ಟಿ.ಹಳಕಟ್ಟಿ ಉಪನ್ಯಾಸ ನೀಡಿ, ಕನಕದಾಸರು, ಹರಿದಾಸರು ತಮ್ಮ ಕಿರ್ತನೆಗಳ ಮೂಲಕ ಇಂದಿಗೂ ಜನಮಾನಸದಲ್ಲಿದ್ದಾರೆ. ೧೨ನೇ ಶತಮಾನದ ಶರಣರು ಗುಂಪಾಗಿ ಸಮಾಜವನ್ನು ತಿದ್ದಲು ಹೋರಾಡಿದರೆ, ದಾಸರು ವಯಕ್ತಿಕ ನೆಲೆಯಲ್ಲಿ, ಜನಸಾಮಾನ್ಯರ ಮನೆ ಮನೆಗೆ ತೆರಳಿ, ಜಿಡ್ಡುಗಟ್ಟಿದ ಸಮಾಜ ವ್ಯವಸ್ಥೆಯಲ್ಲಿ ತಮ್ಮ ಕಿರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯಮಾಡಿದ್ದಾರೆ. ಕನಕದಾಸರು ಇಂದಿಗೂ ಪ್ರಸ್ತುತರಾಗಿರುತ್ತಾರೆ. ಅವರು ರಚಿಸಿರುವ ಮುನ್ನೂರುಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಕಿರ್ತನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಸನ್ಮಾರ್ಗದಲ್ಲಿ ಸಾಗಲು ಸಹಕಾರಿಯಾಗಿವೆ ಎಂದು ಹೇಳಿದರು.
ತಾಲೂಕಿನ ಸಿತಿಮನಿ ಗ್ರಾಮದ ವಶಿಷ್ಠ ಮುನಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಎಫ್.ಟಿ.ಹಳ್ಳಿಕೇರಿ, ಶಿಗ್ಗಾವಿಯ ಪ್ರಾಧ್ಯಾಪಕ ಡಾ.ನದಾಫ ಗೊಡಗೋಡಿ, ಹಾವೇರಿ ಶಿಕ್ಷಕ ಡಾ.ಪ್ರಕಾಶ ಅಮರದ ಅವರಿಗೆ ಕನಕ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ಕುರುಬ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ನಿವೃತ್ತ ಕೃಷಿ ಅಧಿಕಾರಿ ಹನುಮಂತ ಭೀಮಪ್ಪ ಗೊರವರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸ್ವಾಗತಿಸಿದರು. ಕೆರೂರಿನ ಪವಿತ್ರಾ ಜಕ್ಕೆಪ್ಪನವರ ಹಾಗೂ ತಂಡದವರು ಪ್ರಾರ್ಥಿಸಿದರು.