ಹನೂರು: ಸಮಾಜದಲ್ಲಿ ಲಂಬಾಣಿ ಸಮುದಾಯವು ಒಂದು ಉತ್ತಮ ನೆಲೆಯನ್ನು ಹೊಂದಬೇಕಾದರೆ ಶ್ರೀ ಸಂತ ಸೇವಾಲಾಲರು ಪ್ರಮುಖ ಕಾರಣ. ಆದ್ದರಿಂದ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲರ 286ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ಜಗದಾಂಬೆಯ ಆರಾಧಕರಾಗಿ ಬ್ರಹ್ಮಚರ್ಯವನ್ನು ಪಾಲನೆ ಮಾಡಿದ ಅಧ್ಯಾತ್ಮ ಚಿಂತಕರು. ಬಂಜಾರ ಸಮುದಾಯದಲ್ಲಿ ಶ್ರೇಷ್ಠರಾಗಿದ್ದು, ಗುರುವಿನ ಸ್ಥಾನ ಪಡೆದಿದ್ದಾರೆ.
ಇವರು ಒಬ್ಬ ದನಗಾಯಿಯಾಗಿ ತಮ್ಮ ಜೀವನದ ಅನುಭವವನ್ನು ತತ್ವದ ಮೂಲಕ ತಿಳಿಸಿ ಜನರಲ್ಲಿದ್ದ ಅಜ್ಞಾನವನ್ನು ದೂರ ಮಾಡಿದರು. ಅಲ್ಲದೆ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರುವ ಮೂಲಕ ಅಜ್ಞಾನ ಲೋಕಕ್ಕೆ ಮುಕ್ತಿ ತೋರಿದ ದಾರ್ಶನಿಕ. ಈ ದೆಸೆಯಲ್ಲಿ ಸರ್ಕಾರದ ವತಿಯಿಂದ ಜಯಂತಿಯನ್ನು ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಆದರೆ ಬಂಜಾರ ಸಮುದಾಯವು ಸಮಾಜದಲ್ಲಿ ತೀರಾ ಹಿಂದುಳಿದಿದೆ. ಆದ್ದರಿಂದ ಸರ್ಕಾರದ ಸವಲತ್ತುಗಳು ಸಿಗುವಂತಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಜಾಗ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲರೂ ಭಾಗವಹಿಸುವಿಕೆ ಮುಖ್ಯ: ಜಿಲ್ಲಾ ಬಂಜಾರ ನೌಕರರ ಸಂಘದ ಗೌರವಾಧ್ಯಕ್ಷ ಶಾಂತರಾಜು ಮಾತನಾಡಿ, ಮಹನೀಯರ ಆದರ್ಶಗಳು ಎಲ್ಲರಿಗೂ ಮುಖ್ಯ. ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗಾಗಿ ಸರ್ಕಾರದ ವತಿಯಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಆದರೆ ಜಯಂತಿ ಆಚರಣೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗುತ್ತಿದೆ. ಆದ್ದರಿಂದ ಮಹಾನ್ ನಾಯಕರ ಜಯಂತಿಯಲ್ಲಿ ಎಲ್ಲ ಸಮುದಾಯದ ಜನರು, ಅಧಿಕಾರಿಗಳು ಭಾಗವಹಿಸುವಿಕೆ ಅಗತ್ಯವಾಗಿದೆ. ಈ ಬಗ್ಗೆ ಆಸಕ್ತಿ ವಹಿಸಿ ಮುಂದಿನ ದಿನಗಳಲ್ಲಿ ಈ ಕೆಲಸವಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾದೇವ, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಶೇಷಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯ, ಲೋಕೇಶ್, ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ನಾಯಕ್, ಮುಖ್ಯ ಶಿಕ್ಷಕ ಮಹದೇವ, ಮುಖಂಡರಾದ ಮುತ್ತುರಾಜು, ಪ್ರಜ್ವಲ್, ಬಿಳಿಗಿರಿ, ಮಲ್ಲೇಶ್ ಇತರರಿದ್ದರು.