ಬಾಗಲಕೋಟೆ: ಬಾಲ ಬ್ರಹ್ಮಚಾರಿಯಾಗಿ, ಯೋಗಿಯಾಗಿ, ಮಾಹಾನ ಸಂತರಾಗಿ ಲೋಕಕಲ್ಯಾಣಕ್ಕಾಗಿ ಸೇವೆ ಸಲ್ಲಿಸಿದವರು ಸಂತ ಸೇವಾಲಾಲ್ ಮಾಹಾರಾಜರು ಎಂದು ಬಾಗಲಕೋಟೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಹೇಳಿದರು.
ನವನಗರದ ಕಲಾಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಂಬಾಣಿ ಸಾಂಪ್ರದಾಯಿಕ ಪದಗಳು ಮದುವೆ ಸಮಾರಂಭಗಳಲ್ಲಿ, ಸಿಮಂಥ ಕಾರ್ಯ, ಹೋಳಿ ಹುಣ್ಣಿವೆ ಕಾರ್ಯಕ್ರಮಗಳಲ್ಲಿ ಹಾಡುವ ಹಾಡುಗಳಲ್ಲಿ ಲಂಬಾಣಿ ಜನಾಂಗದ ಇತಿಹಾಸವನ್ನು ತಿಳಿಯಬಹುದಾಗಿದೆ ಎಂದರು.
ದಾವಣಗೇರೆ ಜಿಲ್ಲೆಯ ಸುರಗೊಂಡನಕೊಪ್ಪದಲ್ಲಿ ಹುಟ್ಟಿದ ಸೇವಾಲಾಲರು ಸಮಾಜ ಸುಧಾರಣೆ, ಮನುಕುಲದ ಉದ್ದಾರಕ್ಕೆ, ಮಾರ್ಗದರ್ಶಕರಾಗಿ ಹೊರಹೊಮ್ಮಿದ್ದಾರೆ. ಇಂತ ಸಂತರ ನೆನಪಿಗಾಗಿ ಅವರು ಹುಟ್ಟಿದ ಗ್ರಾಮದ ಅಭಿವೃದ್ದಿಗೆ ಸರ್ಕಾರ ಸಾಕಷ್ಟು ಅನುದಾನ ಮಂಜೂರು ಮಾಡಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾರ್ಯ ನಡೆದಿದೆ. ಸೂರ್ಯಗೊಂಡನ ಹಳ್ಳಿಯ ಪಕ್ಕದಲ್ಲಿ ರೇಲ್ವೆ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕಿದೆ. ಕಲಬುರ್ಗಿಯಲ್ಲಿ ಸಮುದಾಯದ ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಲಾಗಿದೆ ಎಂದು ಹೇಳಿದರು.
ಬಂಜಾರ ಸಮುದಾಯದ ಮಕ್ಕಳಿಗೆ ಪತ್ರೇಕವಾಗಿ ವಸತಿ ಶಾಲೆ ತೆಗೆಯಲು ಸರ್ಕಾರ ಹೆಜ್ಜೆ ಇಟ್ಟಿದೆ. ಸರ್ಕಾರ ಈ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪ್ರಯೋಜನ ಪಡೆದು ಸಮುದಾಯದ ಏಳಿಗೆಗೆ ಮುಂದಾಗಬೇಕಿದೆ. ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ಕೀಳುರಿಮೆ ಬಿಟ್ಟು ಮುಖ್ಯವಾಹಿನಿಗೆ ಬರುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಉಪನ್ಯಾಸಕ ಸ್ವತಂತ್ರ ಸಿಂಧೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಹಿಂದುಳಿದ ವರ್ಗಗಳ ಕಲ್ಯಾಣಾಽಕಾರಿ ರಮೇಶ ಚವ್ಹಾಣ, ಸಮುದಾಯದ ಮುಖಂಡರಾದ ಬಲರಾಮ ರಾಠೋಡ, ಹೂವಪ್ಪ ರಾಠೋಡ, ರಾಜು ಲಮಾಣಿ, ರತ್ನಪ್ಪ ರಾಠೋಡ, ಕೃಷ್ಣಪ್ಪ ನಾಯಕ, ನಾಗೇಶ ಮಹಾರಾಜರು, ಅಶೋಕ ರಾಠೋಡ, ರಂಗಮಗೌಡ ಗೌಡರ, ಮಾದವಿ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.