ಜಿಲ್ಲೆ

ಸಂತ ಫಿಲೋಮಿನಾ ಚರ್ಚ್‌ನಲ್ಲಿ ಪವಿತ್ರ ಜ್ಯುಬಿಲ;  8 ಅಡಿ ಎತ್ತರದ ಶಿಲುಬೆಯ ಮೆರವಣಿಗೆ

ಮೈಸೂರು: ನಗರದ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್‌ನಲ್ಲಿ  25 ವರ್ಷಕ್ಕೆ ಒಮ್ಮೆ ಆಚರಿಸಲಾಗುವ ‘ಪವಿತ್ರ ಜ್ಯುಬಿಲಿ’ ಕಾರ್ಯಕ್ರಮ ನೆರವೇರಿತು.

ಬನ್ನಿಮಂಟಪದ ದೀನರ ಮಾತೆ ದೇವಾಲಯದಿಂದ 8 ಅಡಿ ಎತ್ತರದ ವಿಶೇಷ ಶಿಲುಬೆಯ ಮೆರವಣಿಗೆ ಹೊರಟು ಸಂತ ಫಿಲೋಮಿನಾ ಚರ್ಚ್ ತಲುಪಿತು. ಬಳಿಕ ಚರ್ಚ್ ಆವರಣದಲ್ಲಿ ಬಲಿಪೂಜೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಈ ಸಂದರ್ಭದಲ್ಲಿ ಕ್ರೈಸ್ತ ಭಕ್ತಿಗೀತೆ ಹಾಡಲಾಯಿತು.

ಮೈಸೂರು ಧರ್ಮ ಪ್ರಾಂತ್ಯ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ಜಿಲ್ಲೆಗಳಿಂದ ಅಂದಾಜು ಸುಮಾರು 5 ಸಾವಿರ ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿವಿಧ ಚರ್ಚ್, ಸಂಸ್ಥೆಗಳು, ಜಿಲ್ಲಾ ಕೇಂದ್ರಗಳಲ್ಲಿ ವರ್ಷವಿಡೀ ಆಧ್ಯಾತ್ಮಿಕ, ಸಾಮಾಜಿಕ ಚಟುವಟಕೆ ಏರ್ಪಡಿಸಲಾಗಿದ್ದು, ವರ್ಷಪೂರ್ತಿ ಮೈಸೂರು ಧರ್ಮ ಪ್ರಾಂತ್ಯದ ವ್ಯಾಪ್ತಿಗೆ ಬರುವ ಎಲ್ಲ ಚರ್ಚ್‌ಗಳಿಗೆ ಶಿಲುಬೆಯನ್ನು ಕೊಂಡೊಯ್ದು ಪೂಜೆ ಅರ್ಪಿಸಲಾಗುತ್ತದೆ.

ಈ ವೇಳೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜ್ಯುಬಿಲಿ ವರ್ಷ 2026ರ ಜ.6ಕ್ಕೆ ಅಂತ್ಯವಾಗಲಿದ್ದು, ಬಳಿಕ ಶಿಲುಬೆಯನ್ನು ಚರ್ಚ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾರ್ಡ್ ಮೊರಾಸ್, ಧರ್ಮಗುರುಗಳಾದ ಸ್ಟ್ಯಾನ್ಲಿ ಅಲ್ಮೆಡಾ, ಸೆಬಾಸ್ಟಿನ್, ಜೋಸೆಫ್ ಮರಿ, ಫಾಕಿಯ ರಾಜ್ ಸೇರಿದಂತೆ ಇನ್ನಿತರರಿದ್ದರು.