ಜಿಲ್ಲೆ

ಸಂಡೇ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ವ್ಯಾಪಾರಕ್ಕೆ ತಡೆ

ದಾಂಡೇಲಿ: ನಗರದ ಸಂಡೆ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ವ್ಯಾಪಾರ ನಡೆಸುವುದನ್ನು ತಡೆಗಟ್ಟಲು ನಗರಸಭೆ ಮುಂದಾಗಿದೆ.

ಮಾರುಕಟ್ಟೆಯ ಖುಲ್ಲಾ ಜಾಗದಲ್ಲಿ ಕೆಲವರು ತಾಡಪತ್ರಿ ಕಟ್ಟಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಡಾ. ಸೈಯದ್ ಜಾಹೇದಾಲಿ ಇತರರು ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮೀಣ ಭಾಗದಿಂದ ತರಕಾರಿ ಮಾರಾಟ ಮಾಡಲು ಬರುವವರು ಹಾಗೂ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿದವರು ಪ್ರತ್ಯೇಕವಾಗಿ ನಿಗದಿತ ದರವನ್ನು ನಗರಸಭೆಗೆ ಭರಣ ಮಾಡುವ ಷರತ್ತಿನ ಮೇಲೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಜತೆಗೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ನಿಗದಿ ಪಡಿಸಿದ ಸ್ಥಳದಲ್ಲೇ ವ್ಯಾಪಾರ ನಡೆಸಬೇಕು ಎಂದು ವ್ಯಾಪಾರಿಗಳಿಗೆ ಆಯುಕ್ತರು ಎಚ್ಚರಿಕೆ ನೀಡಿದರು. ಜತೆಗೆ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಜಾಗದ ಗುರುತು ಮಾಡಲಾಯಿತು. ನಗರಸಭೆಯ ಕಂದಾಯ ಅಧಿಕಾರಿ ಪರಶುರಾಮ ಶಿಕ್ಕಳಗಾರ, ಆರೋಗ್ಯ ಅಧಿಕಾರಿ ವಿಲಾಸಕುಮಾರ ದೇವಕರ್, ಸಹಾಯಕ ಆರೋಗ್ಯ ಅಧಿಕಾರಿ ಆದಿ ನಾರಾಯಣ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ನಗರದ ವೆಸ್ಟ್​ಕೋಸ್ಟ್ ಪೇಪರ್ ಮಿಲ್ ಸಹಕಾರದೊಂದಿಗೆ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು.