ಜಿಲ್ಲೆ

ಸಂಡೂರು ಪಿಎಸ್‌ಐ ವಿರುದ್ಧ ಕ್ರಮವಹಿಸಿ

ಸಂಡೂರು: ಪರಿಶಿಷ್ಟ ಜಾತಿಯ ಎಚ್.ದುರ್ಗಮ್ಮ ಕೊಂಡಾಪುರ ಅವರನ್ನು ಅವಾಚ್ಯವಾಗಿ ನಿಂದಿಸಿರುವ ಪಿಎಸ್‌ಐ ವೀರೇಶ್ ಮಾಳಗಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೆಚ್ಚುವರಿ ಎಸ್ಪಿ ಎನ್.ನವೀನ್ ಕುಮಾರ್‌ಗೆ ದೇವದಾಸಿ ಮಹಿಳಾ ವಿಮೋಚನಾ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ಸಂಡೂರು ಪಿಎಸ್‌ಐ ವಿರೇಶ್ ಮಾಳಗಟ್ಟಿ ಫೆ.1ರಂದು ದುರ್ಗಮ್ಮರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನೆಪದಲ್ಲಿ ಕೂಡಿ ಹಾಕಿ ಅವಾಚ್ಯವಾಗಿ ನಿಂದಿಸಿ ಅಪಮಾನ ಮಾಡಿದ್ದಾರೆ. ದುರ್ಗಮ್ಮಗೆ 2021-22ರ ಸಾಲಿನಲ್ಲಿ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಗೌರವಿಸಿದೆ. ಬಳ್ಳಾರಿ ಜಿಲ್ಲೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವದಾಸಿಯರು ಹಾಗೂ ಅವರ ಮಕ್ಕಳ ಶಿಕ್ಷಣಕ್ಕಾಗಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.