ಜಿಲ್ಲೆ

ಸಂಚಾರಿ ಪೊಲೀಸರಿಗೆ ಶ್ವಾಸಕೋಶ ತಪಾಸಣೆ

ಮೈಸೂರು: ವಿಶ್ವ ಅಸ್ತಮಾ ದಿನಾಚರಣೆ ಅಂಗವಾಗಿ ಭಾನವಿ ಆಸ್ಪತ್ರೆಯಿಂದ ಮೇ 22 ರಿಂದ 27 ರವರೆಗೆ ನಗರದ ಸಂಚಾರ ವಿಭಾಗದ ಪೊಲೀಸರಿಗೆ ಉಚಿತವಾಗಿ ಶ್ವಾಸಕೋಶ ಕಾರ್ಯ ಪರೀಕ್ಷೆ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಮುರಳಿಮೋಹನ್ ತಿಳಿಸಿದರು.
ಶ್ವಾಸಕೋಶದ ಕಾಯಿಲೆಯು ಧೂಮಪಾನ, ಅತಿಯಾದ ಧೂಳು, ಸಿಲಿಕಾ ಧೂಳಿನಂತಹ ವಸ್ತುಗಳಿಂದ ಹಾಗೂ ಹಲವು ಔದ್ಯೋಗಿಕ ಕಾರಣಗಳಿಂದ ಉಂಟಾಗಬಹುದು. ಆದರೆ ರೋಗ ಕಾಣಿಸಿಕೊಳ್ಳುವ ಮೊದಲೇ ಶ್ವಾಸಕೋಶದ ಕಾರ್ಯ ಕುರಿತ ತಪಾಸಣೆಗೆ ಒಳಗಾದರೆ ಮುನ್ನೆಚ್ಚರಿಕೆ ಕೈಗೊಳ್ಳಬಹುದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಂಚಾರಿ ಪೊಲೀಸರು ಸಹ ಸದಾ ಸಂಚಾರ ನಿರ್ವಹಣೆಯಲ್ಲಿ ತೊಡಗುವುದರಿಂದ ಧೂಳಿನ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿದೆ. ಹಾಗಾಗಿ ಅವರಿಗಾಗಿ ಈ ಶಿಬಿರ ಆಯೋಜಿಸಲಾಗಿದೆ. ನಗರ ಪೊಲೀಸ್ ವಿಭಾಗದಲ್ಲಿ ಸುಮಾರು 450 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರನ್ನು ತಪಾಸಣೆ ಮಾಡಲಾಗುವುದು. ಆಸ್ಪತ್ರೆಯಲ್ಲಿ ಶ್ವಾಸಕೋಶ ಕುರಿತಂತೆ ತಜ್ಞರು, ಅತ್ಯಾಧುನಿಕ ಉಪಕರಣಗಳಿದ್ದು, ಸಾರ್ವಜನಿಕರು ಸಹಾ ಪ್ರಯೋಜನ ಪಡೆಯಬಹುದಾಗಿದೆ ಎಂದು ಮನವಿ ಮಾಡಿದರು.
ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ಆರ್. ಪ್ರಶಾಂತ್, ಆಡಳಿತ ಮಂಡಳಿತ ನಿರಂಜನ್‌ಸ್ವಾಮಿ, ಡಾ. ಚಂದನ್ ಇದ್ದರು.