ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಬುಧವಾರ ಮಧ್ಯಾಹ್ನನದ ನಂತರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದಲ್ಲಿ ಮಧ್ಯಾಹ್ನದಿಂದ ರಾತ್ರಿಯವರೆಗೂ ನಿರಂತರ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ತುಂಬಿದೆ. ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಕಾರವಾರದ ಬರ್ಗಲ್ನಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿದೆ. ದೇವಳಮಕ್ಕಿ ರಸ್ತೆಯಲ್ಲಿ ನೀರು ನಿಂತ ವಾಹನ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತ್ತು. ಮುದಗಾ, ಬಿಣಗಾ, ಚೆಂಡಿಯಾ ಹಾಗೂ ಸಂಕ್ರುಬಾಗ ಹೀಗೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಕಾರವಾರದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಪ್ರಾರಂಭವಾದ ಜಡಿ ಮಳೆ ರಾತ್ರಿಯವರೆಗೂ ಮುಂದುವರಿಯಿತು. ನಗರದ ಹಬ್ಬುವಾಡ ರಸ್ತೆ ಸಂಪೂರ್ಣ ಜಲಾಶಯದಂತಾಯಿತು. ಹೈಚರ್ಚ್ ರಸ್ತೆಯಲ್ಲಿ ನೀರು ನಿಂತಿತ್ತು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೋಡಿಬಾಗ ಸಮೀಪದ ರತ್ನಾಸ್ ಹೋಟೆಲ್ಗೆ ನೀರು ನುಗ್ಗಿತ್ತು. ಕುಮಟಾ ಪಟ್ಟಣದಲ್ಲಿ ಹಲವು ರಸ್ತೆಗಳಲ್ಲಿ ನೀರು ತುಂಬಿತ್ತು. ಹೆರವಟ್ಟಾದ ಸಾನಿಯಮ್ಮ ದೇವಸ್ಥಾನದ ಒಳಗೆ ನೀರು ನಿಗ್ಗಿತ್ತು.
ಕೃಷಿಕರು ಕಂಗಾಲು: ಭತ್ತದ ಬೆಳೆ ಕೊಯ್ಲಿಗೆ ಬಂದ ಸಂದರ್ಭದಲ್ಲಿ ಮಳೆ ಪ್ರಾರಂಭವಾಗಿದ್ದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ಭಾಗದಲ್ಲಿ ಕೊಯ್ಲಿಗೆ ಬಂದ ಹಲವು ಗದ್ದೆಗಳಲ್ಲಿ ನೀರು ನಿಂತಿದೆ.
3 ತಾಸಿನಲ್ಲಿ 92 ಮಿಮೀ ಮಳೆ
ಹೊನ್ನಾವರ ತಾಲೂಕಿನ ಗೇರುಸೊಪ್ಪ ನಗರ ಬಸ್ತಿಕೇರಿ ಭಾಗದಲ್ಲಿ ಒಂದೇ ದಿನದಲ್ಲಿ 204.2 ಮಿಮೀ ಮಳೆಯಾಗಿದೆ. ಭಟ್ಕಳದ ಮಾವಳ್ಳಿ ಪಂಚಾಯಿತಿ ಮುರ್ಡೆಶ್ವರ ಭಾಗದಲ್ಲಿ 145 ಮಿಮೀ ಮಳೆಯಾಗಿದೆ. ಕಾರವಾರದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ 92 ಮಿಮೀ ಮಳೆಯಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲೂ ಹದವಾಗಿ ಮಳೆಯಾಗಿದೆ. ಬುಧವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 0.5, ಭಟ್ಕಳದಲ್ಲಿ 98.6, ಹಳಿಯಾಳದಲ್ಲಿ 34.2, ಹೊನ್ನಾವರದಲ್ಲಿ 61.5, ಕಾರವಾರದಲ್ಲಿ 10.3, ಕುಮಟಾದಲ್ಲಿ 61.6, ಮುಂಡಗೋಡಿನಲ್ಲಿ 12.6, ಸಿದ್ದಾಪುರದಲ್ಲಿ 0.6, ಶಿರಸಿಯಲ್ಲಿ 4, ಜೊಯಿಡಾದಲ್ಲಿ 9.4, ಯಲ್ಲಾಪುರದಲ್ಲಿ 8.2 ಮಿಮೀ ಮಳೆಯಾಗಿದೆ.
ರೆಡ್ ಅಲರ್ಟ್ ಘೊಷಣೆ
ಇನ್ನೂ ಎರಡು ದಿನ ಜಿಲ್ಲೆಯಲ್ಲಿ ಮಳೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.15ರಂದು ಜಿಲ್ಲೆಯಲ್ಲಿ 200 ಮಿಮೀಗಿಂತ ಹೆಚ್ಚು ಮಳೆಯಾಗಬಹುದು ಎಂದು ರೆಡ್ ಅಲರ್ಟ್ ಘೊಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಅ.16 ರಂದು 115 ಮಿಮೀಗಿಂತ ಅಧಿಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಕೆಯಲ್ಲಿ ಗದ್ದೆಗಳು ಜಲಾವೃತ
ಭಟ್ಕಳ: ತಾಲೂಕಿನ ಬೆಳಕೆ ಪಂಚಾಯಿತಿಯ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ರಾತ್ರಿಯ ವೇಳೆಯೂ ಸತತ ಮಳೆ ಸುರಿಯುತ್ತಿದ್ದು, ಗದ್ದೆಯಲ್ಲಿನ ಫಸಲು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಬೆಳಕೆ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ನಾಯ್ಕ ಅವರ 5 ಎಕರೆಗೂ ಹೆಚ್ಚಿನ ಜಮೀನು ಜಲಾವೃತಗೊಂಡಿದೆ. ಈ ಭಾಗದ ಎಲ್ಲ ರೈತರ ಸ್ಥಿತಿಯೂ ಇದೆ ಆಗಿದ್ದು ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.