ಜಿಲ್ಲೆ

ಸಂಚಾರಕ್ಕೆ ಸಂಚಕಾರ, ಮೈಮರೆತರೆ ಅಪಾಯಕರ!

ವಿಜಯವಾಣಿ ವಿಶೇಷ ಲಕ್ಷ್ಮೇಶ್ವರ

ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ಭೀತಿಯಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ತಲೆದೋರಿದೆ.

ಪ್ರಸಕ್ತ ವರ್ಷ ಅತಿವೃಷ್ಟಿಯಾಗಿದೆ. ನಿಯಮ ಮೀರಿ ಮರಳು ತುಂಬಿದ ವಾಹನ ಸಂಚರಿಸುತ್ತವೆ. ರಸ್ತೆ ನಿರ್ವಹಣೆಯಂತೂ ಅಷ್ಟಕ್ಕಷ್ಟೆ ಎನ್ನುವಂತಿದೆ. ಹೀಗಾಗಿ, ತಾಲೂಕಿನಲ್ಲಿನ ಬಹುತೇಕ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ.

ಗದಗ - ಲಕ್ಷ್ಮೇಶ್ವರ ಸಂರ್ಪಸುವ ರಾಜ್ಯ ಹೆದ್ದಾರಿ, ಅಂತರ್ ಜಿಲ್ಲೆ ಸಂರ್ಪಸುವ ಲಕ್ಷ್ಮೇಶ್ವರ - ದೇವಿಹಾಳ, ಲಕ್ಷ್ಮೇಶ್ವರ - ಮುಕ್ತಿಮಂದಿರ, ಸೂರಣಗಿ -ಬಾಲೆಹೊಸೂರ, ಲಕ್ಷ್ಮೇಶ್ವರ-ನೆಲೂಗಲ್, ಸೂರಣಗಿ-ಅಂಕಲಿ, ಗೋನಾಳ-ಶಿಗ್ಲಿ, ಲಕ್ಷ್ಮೇಶ್ವರ-ಯತ್ನಳ್ಳಿ, ಮಾಡಳ್ಳಿ-ಯಳವತ್ತಿ ಸೇರಿ ತಾಲೂಕಿನಲ್ಲಿನ ರಸ್ತೆಗಳು ಹದಗೆಟ್ಟಿವೆ. ಜಿಲ್ಲಾ ಮುಖ್ಯ ರಸ್ತೆಗಳು, ಜಿಪಂ ಇಲಾಖೆ ರಸ್ತೆಗಳು, ಗ್ರಾಮೀಣ ಮತ್ತು ರೈತ ಸಂಪರ್ಕ ರಸ್ತೆಗಳು ಕೂಡ ಹಾಳಾಗಿವೆ.

ಡಾಂಬರ್ ಕಿತ್ತು ರಸ್ತೆಯುದ್ದಕ್ಕೂ ಮೊಣಕಾಲುದ್ದದ ಗುಂಡಿಗಳು ಬಿದ್ದಿವೆ. ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಈ ಭಾಗದ ರಸ್ತೆಗಳ ಬಗ್ಗೆ ಮಾಹಿತಿ ಇರದ ಹೊರ ಜಿಲ್ಲೆ, ಹೊರ ರಾಜ್ಯದ ಚಾಲಕರು ವಾಹನ ಚಲಾಯಿಸುವ ಸಂದರ್ಭದಲ್ಲಿ ಗುಂಡಿಗೆ ಬಿದ್ದು ವಾಹನ ಜಖಂ, ಪಂಕ್ಚರ್ ಆಗುವುದು ಸಾಮಾನ್ಯವಾಗಿದೆ. ಸಾಕಷ್ಟು ಬೈಕ್ ಸವಾರರು ಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದ್ದಾರೆ. ಹಾಳಾದ ರಸ್ತೆಗಳಲ್ಲಿ ವಾಹನ ಚಲಾಯಿಸುವಲ್ಲಿ ಕೊಂಚ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ತಾಲೂಕಿನ ಬಹುತೇಕ ರಸ್ತೆಗಳು ಕಿತ್ತು ಹೋಗಿವೆ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ವಿುಸಿದ ರಸ್ತೆಗಳು ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ವರ್ಷ ಕಳೆಯುವುದಲ್ಲೇ ಹಾಳಾಗಿವೆ. ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. | ಚನ್ನಪ್ಪ ಜಗಲಿ ತಾಪಂ ಮಾಜಿ ಸದಸ್ಯ
ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ತಾಲೂಕಿನ ಭಾಗಶಃ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಈ ಬಗ್ಗೆ ಇಲಾಖೆಗೆ ಪೂರ್ಣ ಮಾಹಿತಿ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ತೀರಾ ಹದಗೆಟ್ಟ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಲಾಗುತ್ತದೆ. ಕೆಲವು ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮಳೆಗಾಲದ ಬಿಡುವು ನೋಡಿಕೊಂಡು ಕಾಮಗಾರಿ ಪ್ರಾರಂಭಕ್ಕೆ ಕಾರ್ಯಾದೇಶ ನೀಡಲಾಗುತ್ತದೆ. | ನರೇಂದ್ರ ಡಿ.ಬಿ , ಪಿಡಬ್ಲ್ಯುಡಿ ಎಇಇ
ಅತಿವೃಷ್ಟಿಯಿಂದಾಗಿ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಮಾಹಿತಿ ಇದೆ. ಕ್ಷೇತ್ರದ ಎಲ್ಲ ರಸ್ತೆಗಳ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾತ್ಕಾಲಿಕವಾಗಿ ತಗ್ಗು ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. | ರಾಮಣ್ಣ ಲಮಾಣಿ ಶಾಸಕರು