ಮೂಡಲಗಿ ಪಟ್ಟಣದ ಹೊರವಲಯದ ಗುರ್ಲಾಪುರ ಕ್ರಾಸ್‌ನಿಂದ ಮೂಡಲಗಿವರೆಗಿನ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಹನುಮಂತ ಗುಡ್ಲಮನಿ,ರೇಣುಕಾ ಹಾದಿಮನಿ, ನಿಂಗಪ್ಪ ಫಿರೋಜಿ, ರವೀಂದ್ರ ಸೋನವಾಲ್ಕರ, ವಿಜಯ ಸೋನವಾಲ್ಕರ, ರಾಮಣ್ಣ ಹಂದಿಗುಂದ, ರವಿ ಸಣ್ಣಕ್ಕಿ, ಅಜೀಜ್ ಡಾಂಗೆ, ಮಲ್ಲು ಢವಳೇಶ್ವರ, ಡಾ. ಎಸ್.ಎಸ್. ಪಾಟೀಲ, ಅನ್ವರ್ ನದಾಫ್, ಸಿದ್ದು ಗಡೇಕರ ಇತರರಿದ್ದರು. 
ಜಿಲ್ಲೆ

ಸಂಚಾರಕ್ಕೆ ರಸ್ತೆ ಶೀಘ್ರ ಮುಕ್ತ

ಮೂಡಲಗಿ: ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದ್ದ ಗುರ್ಲಾಪುರದಿಂದ ಮೂಡಲಗಿವರೆಗಿನ ರಸ್ತೆ ಕಾಮಗಾರಿಯು ಎರಡು ತಿಂಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ಹೊರವಲಯದ ಗುರ್ಲಾಪುರ ಕ್ರಾಸ್ ಬಳಿ ನೀರಾವರಿ ನಿಗಮದ ಅನುದಾನದಡಿ 4.90 ಕೋಟಿ ರೂ. ವೆಚ್ಚದಲ್ಲಿ ಗುರ್ಲಾಪುರ ಕ್ರಾಸ್‌ದಿಂದ ಮೂಡಲಗಿವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮೂಡಲಗಿ ಪಟ್ಟಣಕ್ಕೆ ಬರಲು ಜನರಿಗೆ ಅನುಕೂಲವಾಗಲು ಸುತ್ತಮುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಮೂಡಲಗಿ ಪಟ್ಟಣದ ಸರ್ವಾಂಗೀಣ ಪ್ರಗತಿಗಾಗಿ ಮತ್ತು ಸುಂದರ ಪಟ್ಟಣವನ್ನಾಗಿಸಲು ಸರ್ಕಾರದ ವಿವಿಧ ಯೋಜನೆಗಳಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸುಗಮ ಸಂಚಾರದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೊಳಿಸಲಾಗುತ್ತಿದೆ. ನಾಗರಿಕರಿಗೆ ಅಗತ್ಯವಿರುವ 2.80 ಕಿ.ಮೀ. ಉದ್ದದ ಗುರ್ಲಾಪುರ-ಮೂಡಲಗಿ ರಸ್ತೆ ಕೈಗೆತ್ತಿಕೊಂಡಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಟೆಂಡರ್ ಶೀಘ್ರ: ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಕಾಲೇಜು ರಸ್ತೆಯವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ. ಮುಖ್ಯ ರಸ್ತೆಯಿಂದ ತಹಸೀಲ್ದಾರ್ ಕಚೇರಿವರೆಗಿನ ರಸ್ತೆ ಸಹ ಅಭಿವೃದ್ಧಿಪಡಿಸಲಾಗುವುದು. ಗುರ್ಲಾಪುರ ಕ್ರಾಸ್ ಬಳಿ ನೀರಾವರಿ ಇಲಾಖೆಯಿಂದ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ 4.45 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮುಖಂಡರಾದ ನಿಂಗಪ್ಪ ಫಿರೋಜಿ, ರವೀಂದ್ರ ಸೋನವಾಲ್ಕರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ, ಪುರಸಭೆ ಮಾಜಿ ಅಧ್ಯಕ್ಷರಾದ ರಾಮಣ್ಣ ಹಂದಿಗುಂದ, ರವಿ ಸಣ್ಣಕ್ಕಿ, ಪ್ರಮುಖರಾದ ಅಜೀಜ್ ಡಾಂಗೆ, ಮಲ್ಲು ಢವಳೇಶ್ವರ, ಡಾ. ಎಸ್.ಎಸ್. ಪಾಟೀಲ, ಅನ್ವರ್ ನದಾಫ್, ಸಿದ್ದು ಗಡೇಕರ, ಪ್ರಕಾಶ ಮುಗಳಖೋಡ, ಮಲೀಕ್ ಹುಣಶ್ಯಾಳ, ಮಹಾದೇವ ರಂಗಾಪುರ, ಪುರಸಭೆ ಸದಸ್ಯರಾದ ಆನಂದ ಟಪಾಲ, ಶಿವು ಚಂಡಕಿ, ಅಬ್ದುಲಗಫಾರ್ ಡಾಂಗೆ, ಹುಸೇನಸಾಬ್ ಶೇಖ್, ಸುಭಾಸ ಸಣ್ಣಕ್ಕಿ, ಶಿವಾನಂದ ಸಣ್ಣಕ್ಕಿ, ಸತ್ತೆವ್ವ ಅರಮನಿ, ಜಿಎಲ್‌ಬಿಸಿ, ಕಂಕಣವಾಡಿ ಉಪವಿಭಾಗದ ಸಹಾಯಕ ಅಭಿಯಂತ ವಿನೋದ, ಗುತ್ತಿಗೆದಾರ ಬಸವರಾಜ ಗಂಗರಡ್ಡಿ, ಗುರ್ಲಾಪುರ-ಮೂಡಲಗಿ ಪುರಸಭೆ ಸದಸ್ಯರು ಇತರರು ಉಪಸ್ಥಿತರಿದ್ದರು.

ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಣ್ಣ ಸೇತುವೆಗಳು ಜಲಾವೃತಗೊಂಡಿವೆ. ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳಲ್ಲಿ ಹರಿವು ಹೆಚ್ಚಾಗಿದ್ದರಿಂದ ನದಿ ತೀರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು. ಪ್ರವಾಹ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.| ಬಾಲಚಂದ್ರ ಜಾರಕಿಹೊಳಿ ಶಾಸಕ