ಯಳಂದೂರು ಸಮೀಪದ ಇರಸವಾಡಿ ಗ್ರಾಮದ ಕೆರೆ ಬಳಿ ಡಾಂಬರ್ ರಸ್ತೆ ಕುಸಿದು ಹೋಗಿರುವುದು. 
ಜಿಲ್ಲೆ

ಸಂಚಾರಕ್ಕೆ ತೊಡಕಾಗಿರುವ ಇರಸವಾಡಿ ರಸ್ತೆ

ಯಳಂದೂರು: ತಾಲೂಕಿನ ಇರಸವಾಡಿ ಕೆರೆ ಬದಿಯ ರಸ್ತೆ ಕುಸಿದು ಹಲವು ದಿನಗಳಾಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ. ಇದರಿಂದ ದಿನನಿತ್ಯ ಸಾವಿರಾರು ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ.

ವೈ.ಕೆ.ಮೋಳೆ ಮಾರ್ಗದಿಂದ ಇರಸವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿತ್ತು. ಭಾರಿ ವಾಹನಗಳಾದ ಬಸ್, ಕಬ್ಬಿನ ಲಾರಿ, ಟ್ರಾೃಕ್ಟರ್‌ಗಳ ಸಂಚಾರದಿಂದ ಮತ್ತಷ್ಟು ಕುಸಿಯುತ್ತಿದೆ. ಇದರಿಂದ ಅನಾಹುತಗಳು ಸಂಭವಿಸುವ ಮೊದಲೇ ಎಚ್ಚೆತ್ತಕೊಂಡು ದುರಸ್ತಿಗೆ ಕ್ರಮ ವಹಿಸಬೇಕಾಗಿದೆ. ತಡೆಗೋಡೆ ನಿರ್ಮಿಸಿ: ಇರಸವಾಡಿ ಗ್ರಾಮದ ಕೆರೆಯ ಕಾಲುವೆ ಹಾಗೂ ಜಮೀನುಗಳ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಅಭಿವೃದ್ಧಿ ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಇರಸವಾಡಿ ಕೆರೆ ಬದಿಯ ರಸ್ತೆಯಲ್ಲಿ ಪ್ರತಿನಿತ್ಯ ಯಳಂದೂರು, ವೈ.ಕೆ. ಮೋಳೆ, ಮಸಣಾಪುರ, ಚಾಟೀಪುರ, ಹೊಂಗನೂರು, ಬೂದಂಬಳ್ಳಿಮೋಳೆ, ರೇಚಂಬಳ್ಳಿ, ಹೆಗ್ಗಡೆಹುಂಡಿ, ಚಂದಕವಾಡಿ, ಆಲೂರು ಸೇರಿದಂತೆ ಹಲವು ಗ್ರಾಮಗಳ ಜನರು ವಾಹನಗಳಲ್ಲಿ ಸಂಚರಿಸುತ್ತಾರೆ. ರಸ್ತೆ ಕುಸಿತವಾಗಿರುವ ಕಾರಣ ಹಲವಾರು ಅಪಘಾತಗಳೂ ಸಂಭವಿಸಿವೆ. ಸರ್ಕಸ್ ಮಾಡಿಕೊಂಡೇ ವಾಹನ ಚಲಾಯಿಸುವ ದುಸ್ಥಿತಿ ಎದುರಾಗಿದೆ. ಸ್ವಲ್ಪ ಯಾಮಾರಿದರೂ ಹತ್ತಾರು ಅಡಿ ಆಳದ ಕಂದಕಕ್ಕೆ ವಾಹನ ಬೀಳುವ ಅಪಾಯವಿದೆ. ಪೊಲೀಸರು ರಸ್ತೆ ಎರಡೂ ಕಡೆ ಬ್ಯಾರಿಕೇಡ್ ಹಾಕಿದ್ದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.