ಡಿ.ವಿ.ಕಮ್ಮಾರ ಬೆಳಗಾವಿ
ನಗರದ ಆರ್‌ಪಿಡಿ ಸರ್ಕಲ್‌ನಿಂದ ಪೀರನವಾಡಿ ಕ್ರಾಸ್‌ವರೆಗೆ ಸದಾ ಕಾಲ ವಾಹನ ದಟ್ಟಣೆ ಇರುವ ರಸ್ತೆ. ಇಲ್ಲಿರುವ ಎಲ್ಲ ಸರ್ಕಲ್‌ಗಳು ಅಕ್ಷರಶಃ ಡೇಂಜರ್. ಆಗಾಗ ಸರಣಿ ಅಪಘಾತಗಳು ಇಲ್ಲಿ ಮಾಮೂಲಾಗಿದ್ದು, ಎದ್ದು ಬಿದ್ದು ಜನ ಹಾಗೆಯೇ ಓಡಾಡುವ ಸ್ಥಿತಿ ಇದೆ.
ಖಾನಾಪುರ ಮತ್ತು ಗೋವಾ ಕಡೆಯಿಂದ ಬೆಳಗಾವಿ ನಗರ ಪ್ರವೇಶಿಸುವ ಪೀರನವಾಡಿ ಕ್ರಾಸ್ ದಾಟಬೇಕಾದರೆ ಚಕ್ರವ್ಯೆಹ ಬೇಧಿಸಿದಂತೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಬಲ ಹಿಂಭಾಗದಿಂದ ಖಾನಾಪುರ ಕಡೆಯ ವಾಹನ, ಎಡ ಹಿಂಭಾಗದಿಂದ ಗೋವಾ ಮಾರ್ಗದ ವಾಹನಗಳು ನುಗ್ಗಿ ಬರುತ್ತವೆ. ಈ ಮಧ್ಯೆ ಪ್ರತಿಮೆ ಬಲ ಮುಂಭಾಗದಿಂದ ಬಂದು, ಮೂರ್ತಿಯ ಎಡಭಾಗದ ರಸ್ತೆಗೆ ಯು-ಟರ್ನ್ ತೆಗೆದುಕೊಳ್ಳುವ ವಾಹನಗಳು ಅನಿರೀಕ್ಷಿತವಾಗಿ ಎದುರಿಗೆ ಬಂದು ಇಲ್ಲಿ ಸರಣಿ ಅಪಘಾತ ಸೃಷ್ಟಿಸಲು ಕಾರಣವಾಗಿದೆ.
ಪೀರನವಾಡಿ ಕಡೆ ತಿರುವು ಪಡೆಯುವಾಗ, ಖಾನಾಪುರ ಕಡೆಯಿಂದ ವೇಗವಾಗಿ ಬರುವ ವಾಹನಗಳನ್ನು ನೋಡಿಕೊಂಡು ದಾಟಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ.
ಈ ರಸ್ತೆಯಲ್ಲಿ ಹಲವು ಕಾಲೇಜುಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವಿದೆ. ಗೋವಾ ಕಡೆಯಿಂದ ಬರುವ ವಾಹನಗಳು ಖಾನಾಪುರ ಕಡೆಯಿಂದ ಬರುವವರಿಗೆ ಕಾಣುವುದೇ ಇಲ್ಲ. ಕಳೆದ ವರ್ಷ ಜನವರಿಯಲ್ಲಿ ಪೀರನವಾಡಿ ಕಡೆಯಿಂದ ಸ್ಕೂಟರ್ ಮೇಲೆ ಬರುತ್ತಿದ್ದ ಬ್ರಹ್ಮನಗರದ 23 ವರ್ಷದ ದೀಪಾಗೆ ಖಾನಾಪುರ ಕಡೆಯಿಂದ ಬಂದ ಕಾರ್ ಡಿಕ್ಕಿ ಹೊಡೆದಿದ್ದರಿಂದ ಯುವತಿ ಸ್ಥಳದಲ್ಲಿಯೇ ಮೃತಪಟ್ಟರೆ, ಆ ಕಾರಿನ ಹಿಂದೆ ಸರಣಿ ಅಪಘಾತವಾಗಿ 3 ಕಾರು ಜಖಂಗೊಂಡಿದ್ದವು.
ಈ ಅಪಘಾತದ ಬಳಿಕ ಇಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಮಾಡುವ ಭರವಸೆಗಳನ್ನು ನೀಡಲಾಗಿತ್ತು. ಆದರೆ ಇನ್ನೂ ಪರಿಸ್ಥಿತಿ ಬದಲಾಗಿಲ್ಲ. ಇಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ನಿಯೋಜನೆ ಅಗತ್ಯವಾಗಿದೆ. ಗಣ್ಯರ ಓಡಾಟ ಇದ್ದಾಗ ಮಾತ್ರ ಇಲ್ಲಿ ಸಂಚಾರ ಪೊಲೀಸರು ಕಾಣುತ್ತಾರೆ ಎಂಬುದು ಸ್ಥಳೀಯರ ಆರೋಪ.
ಆ ಬಳಿಕ ಬೆಮ್ಕೋ ಸರ್ಕಲ್‌ನಲ್ಲೂ ಸಿಗ್ನಲ್ ಇಲ್ಲ. ಹೀಗಾಗಿ, ವೇಗವಾಗಿ ಬರುವ ವಾಹನಗಳು ಸ್ವಲ್ಪ ಆಯತಪ್ಪಿದರೂ ಅಪಘಾತಕ್ಕೀಡಾಗುವುದು ನಿಶ್ಚಿತ. ಆಗಾಗ ಅಪಘಾತಗಳಾಗಿ ಸಣ್ಣಪುಟ್ಟ ಗಾಯಗಳಾಗುವ ಪ್ರಕರಣಗಳು ಇಲ್ಲಿ ನಡೆಯುತ್ತಲೇ ಇರುತ್ತವೆ.
ಇನ್ನು 3ನೇ ರೈಲ್ವೆ ಗೇಟ್ ರಸ್ತೆ ಮೇಲ್ಸೇತುವೆ ಸುಗಮ ಸಂಚಾರದ ಬದಲಿಗೆ ಅಪಾಯಕ್ಕೆ ಆಹ್ವಾನ ನೀಡುತ್ತವೆ. ಖಾನಾಪುರ, ಉದ್ಯಮಬಾಗ್ ಕಡೆಯಿಂದ ಬರುವ ಕೆಲ ವಾಹನಗಳು ಸೇತುವೆ ಸಮೀಪದವರೆಗೆ ಬಂದು ಏಕಾಏಕಿ ಯು-ಟರ್ನ್ ತೆಗೆದುಕೊಳ್ಳುತ್ತವೆ. ಆಗ ಸೇತುವೆ ಮೇಲ್ಭಾಗದಿಂದ ಬರುವ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಅನಗೋಳ ವೃತ್ತ ಮತ್ತು ಆರ್‌ಪಿಡಿ ಕ್ರಾಸ್ ನೋಡುವುದಕ್ಕೆ ವಿಶಾಲವಾಗಿದ್ದರೂ ರಸ್ತೆ ಪಕ್ಕದಲ್ಲಿ ಎರ‌್ರಾಬಿರ‌್ರಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಎರಡೂ ಸರ್ಕಲ್‌ಗಳಲ್ಲಿ ಸುಗಮ ಓಡಾಟ ಸಾಧ್ಯವಿಲ್ಲದಂತಾಗಿದೆ. ಇಲ್ಲಿ ಸಿಗ್ನಲ್‌ಗಳನ್ನು ಅಳವಡಿಸಿದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಈ ಭಾಗದ ವೃತ್ತಗಳಲ್ಲಿ ಭವಿಷ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಮಿಕರೇ ಹೆಚ್ಚಾಗಿ ಓಡಾಡುತ್ತಾರೆ. ಈ ಭಾಗದಲ್ಲಿ ನೂರಾರು ಕಾರ್ಖಾನೆಗಳಿವೆ. ಕೇವಲ ಬೈಕ್, ಕಾರ್ ಮಾತ್ರವಲ್ಲದೇ ಸೈಕಲ್ ಮೇಲೆ ಓಡಾಡುವ ಸಾವಿರಾರು ಕಾರ್ಮಿಕರು ಕೈಯಲ್ಲಿ ಜೀವ ಹಿಡಿದುಕೊಂಡೇ ದುಡಿಮೆಗೆ ಹೋಗಿ ಬರುವ ಸ್ಥಿತಿ ಇದೆ.