ಮದ್ದೂರು ಪಟ್ಟಣದ ಪೇಟೆಬೀದಿಯಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿರುವುದು. 
ಜಿಲ್ಲೆ

ಸಂಚಾರಕ್ಕೆ ಅಡ್ಡಿಯಾಗಿರುವ ಒಳಚರಂಡಿ ನೀರು!

ಮದ್ದೂರು: ಪಟ್ಟಣದ ಪೇಟೆಬೀದಿಯಲ್ಲಿ ಬಾರಿ ವಾಹನಗಳ ಸಂಚಾರ ಮತ್ತು ಮಳೆಯಿಂದಾಗಿ ಒಳಚರಂಡಿಯಲ್ಲಿನ ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿರುವ ಪರಿಣಾಮ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಎದುರಾಗಿದೆ.

ಪೇಟೆಬೀದಿಯಲ್ಲಿನ ಅವ್ಯವಸ್ಥೆ ಹಿನ್ನೆಲೆಯಲ್ಲಿ ಪಾದಚಾರಿಗಳು, ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಲುಷಿತ ನೀರು ತುಳಿದುಕೊಂಡೆ ಹೋಗಬೇಕಾದ ದುಸ್ಥಿತಿ ಎದುರಾಗಿದ್ದು, ವಾಹನಗಳು ಹೋದಾಗ ಕಲುಷಿತ ನೀರು ಜನರ ಮೇಲೆ ಹಾರುತ್ತಿತ್ತು . ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುವುದರ ಜತೆಗೆ ಗಬ್ಬು ವಾಸನೆಯಿಂದಾಗಿ ಮೂಗು ಮುಚ್ಚಿ ಓಡಾಡುವ ಸ್ಥಿತಿ ಎದುರಾಗಿದೆ.

ನ.1ರಂದು ಕನ್ನಡ ರಾಜ್ಯೋತ್ಸವ ಇದ್ದು, ವಿದ್ಯಾರ್ಥಿಗಳು ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನ ಆವರಣದಿಂದ ಪೇಟೆಬೀದಿ ಮೂಲಕವೇ ತಾಲೂಕು ಕ್ರೀಡಾಂಗಣಕ್ಕೆ ಪಥ ಸಂಚಲನ ಹೋಗಬೇಕಾಗಿರುವುದಿರಂದ ಶೀಘ್ರವೇ ಒಳಚರಂಡಿ ಸಮಸ್ಯೆ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ, ಸದಸ್ಯ ಆದಿಲ್‌ಆಲಿಖಾನ್ ಹಾಗೂ ಮುಖ್ಯಾಧಿಕಾರಿ ಅಶೋಕ್, ಸಮಸ್ಯೆಯನ್ನು ಪರಿಶೀಲಿಸಿದರು.

ಮಳೆ ಮತ್ತು ಬಾರಿ ವಾಹನಗಳ ಸಂಚಾರದಿಂದಾಗಿ ಸಮಸ್ಯೆ ಉಂಟಾಗಿದ್ದು, ಶೀಘ್ರ ಸಮಸ್ಯೆ ಸರಿಪಡಿಸಲಾಗುವುದು. ಪೇಟೇಬೀದಿಯಲ್ಲಿ ಬಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕುವಂತೆ ಸಂಚಾರಿ ಪೊಲೀಸರ ಗಮನಕ್ಕೆ ತರಲಾಗುವುದು ಎಂದು ಪುರಸಭಾ ಅಧ್ಯಕ್ಷ ಸುರೇಶ್ ತಿಳಿಸಿದರು.

ಪಟ್ಟಣದ ಪೇಟೆಬೀದಿಯಲ್ಲಿ ಒಳ ಚರಂಡಿ ಅವ್ಯವಸ್ಥೆಯಿಂದ ತುಂಬಾ ಸಮಸ್ಯೆಯಾಗಿದೆ. ನ.1 ರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ಇದೇ ದಾರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಥ ಸಂಚಲನ ನಡೆಸುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಒಳ ಚರಂಡಿ ಅವ್ಯವಸ್ಥೆ ಶೀಘ್ರವಾಗಿ ಸರಿಪಡಿಸಬೇಕು.

ವಿಜೇಂದ್ರ ಮದ್ದೂರು ನಿವಾಸಿ