ಜಿಲ್ಲೆ

ಸಂಚಾರ ಸುಧಾರಣೆ ಶಾಸಕ ಅಲ್ಲಮಪ್ರಭು, ಪೊಲೀಸ್ ಆಯುಕ್ತ ಚೇತನ್, ಪಾಲಿಕೆ ಆಯುಕ್ತ ಭುವನೇಶ ಪರಿಶೀಲನೆ

ಕೇಂದ್ರ ಬಸ್ ನಿಲ್ದಾಣ ಹಿಂದುಗಡೆ ಆಟೋ ಪ್ರಯಾಣಿಕರ ಇಳಿಸು ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ  ಕೇಂದ್ರ ಬಸ್ ನಿಲ್ದಾಣ ಸುತ್ತಲಿನ  ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೊಳಿಸಿ, ರಸ್ತೆಗಳನ್ನು ದುರಸ್ತಿಗೊಳಿಸುವ ಕೆಲಸವನ್ನು ಮಾಡಲು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮತ್ತು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ಅವರ ಜತೆಗೂಡಿ ಶನಿವಾರ ಪರಿಶೀಲಿಸಿದರು.
ಎಂಎಸ್‌ಕೆ ಮಿಲ್ ಪ್ರದೇಶದ ಮುಖ್ಯರಸ್ತೆ, ಬಸ್ ನಿಲ್ದಾಣ, ಸಿಐಬಿ ಕಾಲನಿಯಲ್ಲಿ ಹಾದು ಹೋಗುವ ರಸ್ತೆ ಹೀಗೆ ಎಲ್ಲಡೆ ಸುತ್ತಾಡಿ ಪರಿಶೀಲಿಸಿದರು. ಅಲ್ಲದೆ ಜನರಿಂದಲೂ ಫೀಡ್ ಬ್ಯಾಕ್ ಪಡೆದುಕೊಂಡು ಕೆಲವೊಂದು ಬದಲಾವಣೆ ಮಾಡಲು ಸಹ ನಿರ್ಧಾರಿಸಿದರು.
ಕಣ್ಣಿ ಮಾರುಕಟ್ಟೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಜೇವರ್ಗಿ ಕ್ರಾಸ್, ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಕಡೆಗೆ ಬರುವ ಆಟೋಗಳಿಗಾಗಿ  ಬಸ್ ನಿಲ್ದಾಣ ಮುಂಭಾಗದ ಕೆಎಚ್‌ಬಿ ಕಾಂಪ್ಲೆಕ್ಸ್ನಿAದ ಸಂತೋಷ  ಕಾಂಪ್ಲೆಕ್ಸವರೆಗೂ ಬ್ಯಾರಿಕೇಡ್‌ಗಳನ್ನು ಹಾಕಿ ಆಟೋ ಲೈನ್‌ನನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿಯೇ ಆಟೋ ಸಂಚಾರ ಕಡ್ಡಾಯವಾಗಿ ಮಾಡುವಂತೆ ಮಾಡಿದ ವ್ಯವಸ್ಥೆಯನ್ನು ಶಾಸಕರು ಪರಿಶೀಲಿಸಿದರು.
ಜೇವರ್ಗಿ ಕ್ರಾಸ್‌ನಿಂದ ಬಸ್ ನಿಲ್ದಾಣ ಕಡೆಗೆ ಬರುವ ಆಟೋಗಳನ್ನು ಶಾನ್‌ಭಾಗ್ ಫಂಕ್ಷನ್ ಹಾಲ್ ಬಳಿಯಿಂದಲೇ ತಿರುವು ಮಾಡಿಕೊಂಡು ಸಿಐಬಿ ಕಾಲನಿಯಲ್ಲಿ ಹಾದು ಬಸ್ ನಿಲ್ದಾಣದ ಹಿಂಭಾಗದಲ್ಲಿ ಹೋಗಿ  ಆಟೋಗಳನ್ನು ನಿಲ್ಲಿಸುವಂತೆ ಮಾಡಲಾಗಿದೆ. ಹೀಗಾಗಿ ಇನ್ಮುಂದೆ ಆಟೋಗಳಲ್ಲಿ ಬಂದವರು ಬಸ್ ನಿಲ್ದಾಣ ಮುಂಭಾಗದಲ್ಲಿ ಬಂದು ಇಳಿಯುವಂತಿಲ್ಲ. ಹಿಂದಿನ ದ್ವಾರದ ಮೂಲಕ ಒಳಗೆ ಬರುವ ವವಸ್ಥೆ ಮಾಡಲು ಶಾಸಕರು ಹಾಗೂ ಪೊಲೀಸ್ ಆಯುಕ್ತರು ಚರ್ಚೆ ನಡೆಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾಡಿದರು. ಅಲ್ಲಿಂದ ಆಟೋಗಳು ಸಿಐಬಿ ಕಾಲನಿಯ ಮುಖ್ಯರಸ್ತೆಯಲ್ಲಿ ಹಾದು ಮರಳಿ ಎಂಎಸ್‌ಕೆ ಮಿಲ್ ರಸ್ತೆಯ ಕೆಎಚ್‌ಬಿ ಕಾಂಪ್ಲೆಕ್ಸ್ ಬಳಿಯಲ್ಲಿನ ಆಟೋ ಲೈನ್‌ಗೆ ಬಂದು ಸೇರಿಕೊಳ್ಳಬಹುದಾಗಿದೆ. ಆಟೋಗಳು ಸಿಐಬಿ ಕಾಲನಿಯಲ್ಲಿ ಹಾದು ಹೋಗುವುದರಿಂದ ಮಕ್ಕಳಿಗೆ ತೊಂದರೆ ಆಗಲಿದೆ ಎಂದು ಜೆಡಿಎಸ್ ಮುಖಂಡ ಶಾಮರಾವ ಸೂರನ್ ದೂರಿದರು.
ಬಸ್ ನಿಲ್ದಾಣ ಹಿಂಭಾಗದ ಏರಿಯಾದಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಅದನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಾದ ಭುವನೇಶ ಪಾಟೀಲ್ ಅವರಿಗೆ ಶಾಸಕ ಅಲ್ಲಮಪ್ರಭು ತಿಳಿಸಿದರು. ಅಲ್ಲಿನ ಬೋರ್‌ವೆಲ್ ದುರಸ್ತಿಗೊಳಿಸಿ ಜನರಿಗೆ ಅನುವು ಮಾಡಲು ಸಹ ಸಲಹೆ ನೀಡಿದರು.