ಚಿಕ್ಕಮಗಳೂರು: ನಗರದ ಟ್ರಾಫಿಕ್ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಇಂದಿರಾ ಗಾಂಧಿ, ಎಂ.ಜಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ರಸ್ತೆಗಳಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಲು ಬಣ್ಣದ ಗುರುತು ಹಾಕಬೇಕು. ಇದರಿಂದ ವಾಹನಗಳು ವ್ಯವಸ್ಥಿತವಾಗಿ ನಿಲ್ಲುತ್ತವೆ ಮತ್ತು ಹೆಚ್ಚು ವಾಹನಗಳು ನಿಲ್ಲಲು ಸಾಧ್ಯವಾಗುತ್ತದೆ. ಎಂ.ಜಿ ರಸ್ತೆ ನಿವಾಸಿಗಳು ಒಂದಕ್ಕಿಂತ ಹೆಚ್ಚು ನಾಲ್ಕು ಚಕ್ರ ವಾಹನಗಳನ್ನು ಹೊಂದಿದ್ದು ಅವುಗಳನ್ನು ಸದಾ ರಸ್ತೆಯಲ್ಲೇ ನಿಲ್ಲಿಸಿರುತ್ತಾರೆ. ಹಾಗಾಗಿ ಪ್ರವಾಸಿಗರು ಮತ್ತು ವ್ಯಾಪಾರ ವಹಿವಾಟಿಗೆ ಬರುವ ಜನರಿಗೆ ರ್ಪಾಂಗ್ ಮಾಡಲು ತೊಂದರೆಯಾಗಿದೆ. ನಿವಾಸಿಗಳಿಗೆ ರ್ಪಾಂಗ್ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಈ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ನಾಲ್ಕು ಚಕ್ರ ವಾಹನಗಳಿಗೆ ಜಾಗವೇ ಸಿಗುವುದಿಲ್ಲ. ಹಾಗಾಗಿ ಒಂದು ಸ್ಥಳದಿಂದ ನಿಗದಿತ ಸ್ಥಳದವರೆಗೆ ನಾಲ್ಕು ಚಕ್ರ, ದ್ವಿಚಕ್ರ ವಾಹನಗಳ ರ್ಪಾಂಗ್ಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿದರೆ ಸಂಚಾರ ಸುಗಮವಾಗುತ್ತದೆ. ಹನುಮಂತಪ್ಪ ವೃತ್ತ ಹಾಗೂ ಎನ್ಎಂಸಿ ವೃತ್ತಗಳಲ್ಲಿ ಸಿಗ್ನಲ್ ದೀಪಗಳು ಒಂದು ವರ್ಷದಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬಹುತೇಕ ವೃತ್ತಗಳಲ್ಲಿ ಸಂಚಾರಕ್ಕೆ ವಾಹನ ಸವಾರರು ಪರದಾಡುತ್ತಿದ್ದಾರೆ. ಈಗಿರುವ ಸಿಗ್ನಲ್ ದೀಪಗಳನ್ನು ಸರಿಪಡಿಸಬೇಕು. ಮತ್ತೆಲ್ಲಿ ಅಳವಡಿಸಬೇಕು ಎಂಬುದನ್ನು ಗುರುತಿಸಬೇಕೆಂದು ಒತ್ತಾಯಿಸಿದರು.
ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಮಾಡಿರುವುದು ಒಳ್ಳೆಯದು. ಆದರೆ ಇದು ನಗರಕ್ಕೆ ಸೀಮಿತವಾಗಿದೆ. ಜಿಲ್ಲೆಯ ಎಲ್ಲ ಕಡೆ ಒಂದೇ ಕಾನೂನು ಸುವ್ಯವಸ್ಥೆ ಇರಬೇಕು. ನಗರದಲ್ಲಿ 30 ಕಿಮೀಗಿಂತ ಹೆಚ್ಚು ವೇಗವಾಗಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಸೀಟ್ ಬೆಲ್ಟ್ ಕಡ್ಡಾಯ ಮಾಡಬೇಕಿಲ್ಲ. ಐ.ಜಿ ರಸ್ತೆಯಲ್ಲಿ ಡಿವೈಡರ್ ನಿರ್ವಣವಾಗಿದ್ದು ಮಥಾಯಸ್ ಟವರ್, ತೊಗರಿಹಂಕಲ್ ಸರ್ಕಲ್, ಬೋಳರಾಮೇಶ್ವರ ಸರ್ಕಲ್ ಹಾಗೂ ಎಂಇಎಸ್ ಕಾಲೇಜು ಸಮೀಪ ವೃತ್ತಗಳಲ್ಲಿ ವಾಹನಗಳು ತಿರುಗಿ ಇನ್ನೊಂದು ರಸ್ತೆಗೆ ಹೋಗಲು ಹರಸಾಹಸಪಡಬೇಕಾಗಿದೆ. ಈ ರಸ್ತೆಯ ತಿರುವುಗಳ ಎರಡೂ ಬದಿಗಳಲ್ಲಿ ಕನಿಷ್ಠ 20 ಅಡಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.