ಜಿಲ್ಲೆ

ಸಂಚಾರ ಪೊಲೀಸರ ತಲೆಗೆ ಎಸಿ ಹೆಲ್ಮೇಟ್​

ಕಲಬುರಗಿ: ಬಿಸಿಲ ಬೇಗೆ ಹೆಚ್ಚಾಗಿದ್ದು, ಬಿಸಿಲಲ್ಲಿ ನಿಂತ್ತು ಕೆಲಸ ಮಾಡುವ ಸಂಚಾರ ಪೊಲೀಸ್​ ಸಿಬ್ಬಂದಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಹವಾ ನಿಯಂತ್ರಿತ (ಎಸಿ) ಹೆಲ್ಮೆಟ್​ ವಿತರಿಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ಹೇಳಿದರು.

ಪ್ರತಿ ರ‍್ಷ ಬೇಸಿಗೆಯ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ೪೨ ರಿಂದ ೪೫ ಡಿಗ್ರಿವರೆಗೆ ಉಷ್ಣಾಂಶ ಕಂಡು ಬರುತ್ತಿದೆ. ಭೀಕರ ಬಿಸಿಲಿನಲ್ಲಿ ಸಂಚಾರ ನಿಯಂತ್ರಣ ಮಾಡಲು ಸಿಗ್ನಲ್​ ಸೇರಿ ನಗರದಾದ್ಯಂತ ಸಂಚಾರ ಠಾಣೆ ಸಿಬ್ಬಂದಿ ಬಿಸಿಲಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಲು ೧೦ ಸಿಬ್ಬಂದಿಗೆ ಎಸಿ ಹೆಲ್ಮೇಟ್​ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಚಾರ ಪೊಲೀಸ್​ ಸಿಬ್ಬಂದಿಗೆ ೧೦ ಎಸಿ ಹೆಲ್ಮೇಟ್​, ೧೦ ಪೊಲ್ಯುಷನ್​ ಕಂಟ್ರೊಲ್​ ಮಾಸ್ಕ್​, ರಾತ್ರಿಯಲ್ಲಿ ಹೊಳೆಯುವ ೧೪೦ ಜಾಕೆಟ್​, ಲೈಟಿನ ೧೫೦ ಬ್ಯಾಟನ್​ (ರಾತ್ರಿ ವೇಳೆ ರ‍್ತವ್ಯಕ್ಕೆ ಸಹಕಾರಿ)ಗಳನ್ನು ವಿತರಿಸಲಾಗಿದೆ. ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಜಾರಿ ಮಾಡಿದ್ದು, ಸಿಬ್ಬಂದಿ ಪ್ರತಿಕ್ರಿಯೆ ಆಧರಿಸಿ ಹೆಚ್ಚಿನ ಎಸಿ ಹೆಲ್ಮೇಟ್​ ಸೇರಿ ಇತರ ಉಪಕರಣ ಖರೀದಿಸಲಾಗುವುದು ಎಂದರು.

ಬಿಸಿಲಿನಲ್ಲಿ ಸಿಗ್ನಲ್​ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕುಡಿಯುವ ನೀರು, ಮಜ್ಜಿಗೆ ಹಾಗೂ ಜ್ಯೂಸ್​ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನ ವೇಳೆ ಬೆಳಗ್ಗೆ ೧೧ರಿಂದ ಸಂಜೆ ೫ರ ವರೆಗೆ ಎಸಿ ಹೆಲ್ಮೇಟ್​ ಬಳಸಬಹುದಾಗಿದೆ. ಒಟ್ಟಾರೆಯಾಗಿ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಾಂಕೇತಿಕವಾಗಿ ಸಂಚಾರ ಠಾಣೆ ಪಿಐಗಳಾದ ಮಹಾಂತೇಶ ಪಾಟೀಲ್​ಗೆ ಹೆಲ್ಮೆಟ್​ ಕಿಟ್​ ವಿತರಿಸಲಾಯಿತು. ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲಾ, ಪ್ರವಿಣ ನಾಯಕ ಸೇರಿ ಎಲ್ಲ ಠಾಣೆಯ ಪಿಐಗಳು, ಪಿಎಸ್​ಐ, ಎಎಸ್​ಐ ಇದ್ದರು.