ಚನ್ನರಾಯಪಟ್ಟಣ: ಪಟ್ಟಣವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ತಿರುಮಲ ಕಲ್ಯಾಣ ಮಂಟಪ ಹಾಗೂ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ಲೈಟ್ ಅಳವಡಿಕೆ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೃತ್ತದಲ್ಲಿ ನೂತನವಾಗಿ ಅಳವಡಿಸಿರುವ ಸಿಗ್ನಲ್ ಲೈಟ್‌ಗಳಿಗೆ ಸೋಮವಾರ ಪೂಜೆ ಸಲ್ಲಿಸಿ ಸಿಗ್ನಲ್ ದೀಪದ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡಿ, ಸಂಚಾರ ನಿಯಮ ಪಾಲನೆ ಅಗತ್ಯ ಎಂದರು.
ಪಟ್ಟಣವು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಅಷ್ಟೇ ವೇಗದಲ್ಲಿ ಸಂಚಾರ ದಟ್ಟಣೆ ಪ್ರಮಾಣ ಕೂಡ ಏರಿಕೆಯಾಗುತ್ತಿದೆ. ಸದಾ ಜನ ಜಂಗುಳಿ ಹಾಗೂ ವಾಹನಗಳ ಸಂಚಾರ ಹೆಚ್ಚಾಗಿರುವ ಆಸ್ಪತ್ರೆಯ ವೃತ್ತದಲ್ಲಿ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಸಿಗ್ನಲ್ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ದ್ವಿಚಕ್ರ ವಾಹನಗಳ ಸವಾರರು ಅತೀ ವೇಗವಾಗಿ ವಾಹನಗಳನ್ನು ಓಡಿಸುವುದು ಚಾಲಕರ ನಿರ್ಲಕ್ಷ್ಯದ ಚಾಲನೆ ಸಾಮಾನ್ಯವಾಗಿದೆ. ವೃತ್ತಗಳಲ್ಲಿ ಪಾದಚಾರಿಗಳು ಆತಂಕದಿಂದ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ. ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆಯಿಂದ ವಾಹನಗಳ ಸಂಚಾರ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದರು.
ಹೊಸಾ ಬಸ್ ನಿಲ್ದಾಣ ಹಾಗೂ ಮೈಸೂರು ರಸ್ತೆಯ ವೃತ್ತದ ಬಳಿ ಕೂಡ ವಾಹನಗಳ ಹೆಚ್ಚು ಓಡಾಟವಿದ್ದು ಸಂಚಾರಿ ಪೊಲೀಸರು ಜಾಗೃತೆ ವಹಿಸಬೇಕು. ವೈಜ್ಞಾನಿಕ ಸಲಹೆ ಪಡೆದು ಸಿಗ್ನಲ್ ಲೈಟ್‌ಗಳ ಅಳವಡಿಕೆಗೆ ಚಿಂತನೆ ಮಾಡಲಾಗುವುದು ಹಾಗೂ ಸಿಗ್ನಲ್ ಲೈಟ್‌ಗಳನ್ನು ಪುರಸಭೆ ವತಿಯಿಂದ ನಿರ್ವಹಣೆಗೆ ಸಹಕಾರ ನೀಡುವ ಭರವಸೆ ನೀಡಿದರು.
ಪುರಸಭಾ ಅಧ್ಯಕ್ಷೆ ರೇಖಾ ಅನಿಲ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಬನಶಂಕರಿ ರಘು, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ನಿರ್ದೇಶಕ ಅನಿಲ್ ಮರಗೂರ್, ಪುರಸಭಾ ಸದಸ್ಯರಾದ ಇಲಿಯಾಸ್, ಗಣೇಶ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟೇಶ್, ಸಂಚಾರಿ ಪೊಲೀಸ್ ಠಾಣೆಯ ನಿರೀಕ್ಷಕ ರವಿಶಂಕರ್, ಪರಿಸರ ಪ್ರೇಮಿ ಚ.ನಾ.ಅಶೋಕ್ ಹಾಗೂ ಇತರರು ಉಪಸ್ಥಿತರಿದ್ದರು.