ಮೈಸೂರು: ನಗರದ ವಿ.ವಿ. ಮೊಹಲ್ಲಾದಲ್ಲಿರುವ ನ್ಯೂ ಡಯಾಕೇರ್, ನವಾಯು ಫೌಂಡೇಷನ್, ಗಂಧದಗುಡಿ ಫೌಂಡೇಷನ್ ಹಾಗೂ ಮೈಸೂರು ಸಂಚಾರ ಪೊಲೀಸರ ಸಹಯೋಗದಲ್ಲಿ ಬುಧವಾರ ಸಂಚಾರ ಠಾಣೆ ಪೊಲೀಸರಿಗೆ ಆರೋಗ್ಯ ತಪಾಸಣೆ, ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇವರಾಜ ಸಂಚಾರ ಪೊಲೀಸ್ ಸಿಬ್ಬಂದಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯೂ ಡಯಾಕೇರ್ ಸಂಸ್ಥೆಯ ನಿರ್ದೇಶಕ, ಮಧುಮೇಹ ತಜ್ಞ ಡಾ. ಎ.ಆರ್. ರೇಣುಕಾಪ್ರಸಾದ್ ಉಪನ್ಯಾಸ ನೀಡಿ, ಪ್ರತಿಯೊಬ್ಬರಿಗೂ ಅವರ ದೇಹವೇ ಉತ್ತಮ ಗೆಳೆಯನಾಗಿದ್ದು, ಕೊನೆಯವರೆಗೂ ತನ್ನ ಒಡಲನ್ನು ಉತ್ತಮವಾಗಿ ನೋಡಿಕೊಳ್ಳುವುದೇ ಆರೋಗ್ಯಕ್ಕೆ ಬುನಾದಿ ಎಂದರು.
ಇಂದು ನಾವು ಎದುರಿಸುತ್ತಿರುವ ದಿನನಿತ್ಯದ ಒತ್ತಡಗಳಿಂದಾಗಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ರೋಗಗಳು ಹೆಚ್ಚಾಗಿ ಕಂಡುಬರುತ್ತಿವೆ. ಒತ್ತಡಗಳನ್ನು ವಿವಿಧ ವಿಧಾನಗಳು, ವ್ಯಾಯಾಮ, ಯೋಗ, ಧ್ಯಾನದಂತಹ ಅಭ್ಯಾಸಗಳಿಂದ ಕಡಿತಗೊಳಿಸುವುದರ ಮೂಲಕ ಆರೋಗ್ಯಕರ ಜೀವನಕ್ಕೆ ಹೆಜ್ಜೆ ಇಡಬೇಕಿದೆ ಎಂದು ಸಲಹೆ ನೀಡಿದರು.
ನವಾಯು ಫೌಂಡೇಶನ್ ಅಧ್ಯಕ್ಷ ಆಯುರ್ವೇದ ವೈದ್ಯೆ ಡಾ.ಪಿ. ನವ್ಯಾ ಅವರು ಆಹಾರ ಪದ್ಧತಿ ದಿನನಿತ್ಯದಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಅಭ್ಯಾಸಗಳಿಂದ ಒತ್ತಡಗಳಿಂದ ದೂರವಿರಬಹುದು ಎಂದು ತಿಳಿಸಿದರು.
ದೇವರಾಜ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಎನ್. ಮುನಿಯಪ್ಪ, ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್, ಗಂಧದಗುಡಿ ಫೌಂಡೇಶನ್ ಅಧ್ಯಕ್ಷ ಆರ್ಯನ್ ಇತರರಿದ್ದರು. ಶಿಬಿರಲ್ಲಿ 80ಕ್ಕೂ ಹೆಚ್ಚು ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.