ಜಿಲ್ಲೆ

ಸಂಘರ್ಷ ನಿಯಂತ್ರಣಕ್ಕೆ ಅನೇಕ ಕ್ರಮ: ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ

ಮಂಜುನಾಥ ತಿಮ್ಮಯ್ಯ

ಹುಣಸೂರು(ಮೈಸೂರು ಜಿಲ್ಲೆ): ಆನೆ ಸೇರಿದಂತೆ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಸೌರ ತಂತಿಬೇಲಿ, ಟೆಂಟಕಲ್ ಫೆನ್ಸಿಂಗ್, ಆನೆ ಕಂದಕಗಳ ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ದಸರಾ ಅಂಗವಾಗಿ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಗಜಪಯಣ ಕಾರ್ಯಕ್ರಮದಲ್ಲಿ 9 ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.

ಸೌರ ತಂತಿಬೇಲಿ, ಟೆಂಟಕಲ್ ಫೆನ್ಸಿಂಗ್, ಆನೆ ಕಂದಕಗಳ ಸಮರ್ಪಕ ನಿರ್ವಹಣೆಗೆ ಸೂಚನೆ ನೀಡಲಾಗಿದೆ. ನಾನು ಅರಣ್ಯ ಸಚಿವನಾಗುವ ಮೊದಲು ಅಂದರೆ 2023ರ ಜೂನ್‌ವರೆಗೆ ರಾಜ್ಯದಲ್ಲಿ 312.918 ಕಿ.ಮೀ. ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಾನು ಸಚಿವನಾದ ಬಳಿಕ ಕಳೆದ 2 ವರ್ಷದಲ್ಲಿ 115.085 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 193 ಕಿ.ಮೀ. ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ. ಮುಂದಿನ ಒಂದೆರಡು ವರ್ಷದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಉಳಿದ ಕಡೆಯೂ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು.

ಹೊರರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರುಗಳನ್ನು ತಂದು ನಮ್ಮ ರಾಜ್ಯದ ಅರಣ್ಯ ಪ್ರದೇಶದಲ್ಲಿ ಮೇಯಿಸುತ್ತಿದ್ದಾರೆ. ಆದ್ದರಿಂದ ವನ್ಯಜೀವಿಗಳಿಗೆ ಕಾಡಿನಲ್ಲಿ ಆಹಾರ ಲಭಿಸದಂತಾಗಿದೆ. ಹೀಗಾಗಿ, ಹೊರರಾಜ್ಯದಿಂದ ತಂದು ದನಕರು ಮೇಯಿಸುವುದನ್ನು ಮಾತ್ರವೇ ನಿಷೇಧಿಸಲು ಕ್ರಮ ವಹಿಸಲಾಗಿದೆ ಎಂದರು.

ಸಫಾರಿಯಲ್ಲಿ ವನ್ಯಜೀವಿಗಳನ್ನು, ದಸರಾ ಜಂಬೂಸವಾರಿಯಲ್ಲಿ ಅಲಂಕೃತ ಆನೆಗಳನ್ನು ನೋಡಿ ಆನಂದಿಸುವ ನಾವು ಅವುಗಳ ಸಂರಕ್ಷಣೆಗೂ ಮುಂದಾಗಬೇಕು. ಜತೆಗೆ, ಪ್ರಕೃತಿ ಪರಿಸರದ ಸಮತೋಲನಕ್ಕೆ ವನ್ಯಜೀವಿಗಳು ಅತ್ಯವಶ್ಯಕವಾಗಿದ್ದು, ಅವುಗಳ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದರು.

ತಂತಿ ಬೇಲಿಗಳಿಗೆ ಅಕ್ರಮವಾಗಿ ಪ್ರವಹಿಸಿದ ವಿದ್ಯುತ್ ಸ್ಪರ್ಶದಿಂದ ಆನೆಗಳು ಮೃತಪಡುತ್ತಿದ್ದರೆ, ಉರುಳಿಗೆ ಚಿರತೆಗಳು ಸಿಲುಕಿ ನರಳಾಡಿ ಸಾಯುತ್ತಿವೆ. ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ವಿಷಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ವನ್ಯಜೀವಿಗಳ ಜಾಗವನ್ನು ಆಕ್ರಮಿಸಿರುವ ನಾವು ಅವುಗಳನ್ನು ನಿರ್ದಯವಾಗಿ ಕೊಲ್ಲದೆ, ಅವುಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಪ್ರಕೃತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಅರಣ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆದಿವಾಸಿಗಳಿಗೆ, ಅರಣ್ಯವಾಸಿಗಳ ಸಮಸ್ಯೆಗೆ ಸ್ಪಂದಿಸಲಾಗುವುದು. ಜಂಟಿ ಸಮೀಕ್ಷೆ ನಡೆಸಿ 2015ಕ್ಕೆ ಮೊದಲು ಪಟ್ಟಾ ಜಮೀನೂ ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ಹಾಗೂ ಮನೆ ನಿರ್ಮಿಸಿಕೊಂಡಿರುವವರಿಗೆ ತೊಂದರೆ ನೀಡದಂತೆ ಸೂಚಿಸಲಾಗಿದೆ ಎಂದರು.