???????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸಂಘಟಿರಾಗಿ ಹೋರಾಟ ನಡೆಸೋಣ

Hassan

ಅರಸೀಕೆರೆ: ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡನಿಗೆ ತಕ್ಕಪಾಠ ಕಲಿಸುವ ಸಮಯ ಹತ್ತಿರವಾಗಿದ್ದು, ಚುನಾವಣೆಯಲ್ಲಿ ಎಲ್ಲರೂ ಸಂಘಟಿರಾಗಿ ಹೋರಾಟ ನಡೆಸಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕರೆ ನೀಡಿದರು.

ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಕಚೇರಿ ಬಳಿ ಮಂಗಳವಾರ ಸಂಜೆ ಕರೆದಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮುಖನೋಡಿ, ಅವರು ಹೇಳಿದ ಕೂಡಲೇ ಓಡಿಬಂದು ಮತ ಹಾಕುವುದಿಲ್ಲವೆಂದು ದುರಾಹಂಕಾರದ ಮಾತುಗಳನ್ನಾಡಿರುವ ವ್ಯಕ್ತಿಯನ್ನು ಮನೆಗೆ ಕಳುಹಿಸುವ ಕಾಲ ಹತ್ತಿರವಾಗಿದೆ. ಶ್ರೀ ಜೇನುಕಲ್ ಸಿದ್ದೇಶ್ವರರೇ ಸಂತೋಷ್ ಅವರನ್ನು ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ನೀವೆಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಮೂಲಕ ವಿಜಯಪತಾಕೆ ಹಾರಿಸೋಣ ಎಂದು ಉತ್ಸಾಹ ತುಂಬಿದರು.

ಪತ್ನಿ ತೋಟದಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ಹಾಗಾದರೆ ಎರಡು ಬೇನಾಮಿ ಕ್ರಷರ್ ಯಾರ ಹೆಸರಿನಲ್ಲಿವೆ ಎನ್ನುವುದಕ್ಕೆ ಸ್ಪಷ್ಟನೆ ನೀಡಬೇಕು. ರಾಗಿ ಕಳ್ಳತನ ಮಾಡಿಲ್ಲವೆಂದು ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದರು. ಅದೇ ರೀತಿ ಜೆಡಿಎಸ್ ಬಿಡುವುದಿಲ್ಲವೆಂದು ಹೇಳಿರಲಿಲ್ಲವೇ? ಸತ್ಯ ಮಾಡಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಪದವಿ, ಪದವಿ ಪೂರ್ವ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸಿದ್ದೇವೆ. ಇಂಧನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಲ್ಲರಿಗೂ ಗೊತ್ತಿದೆ. 2018ರ ಅವಧಿಯ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ 250 ಕೋಟಿ ರೂ. ಅನುದಾನ ಯಾರ ಪಾಲಾಗಿದೆ ಎಂಬದಕ್ಕೆ ಶಾಸಕ ಉತ್ತರಿಸಬೇಕು. ವೀರಶೈವ ಲಿಂಗಾಯತರ ಕ್ಷೇತ್ರದಲ್ಲಿ ಈತನಿಗೆ ಟಿಕೆಟ್ ನೀಡಬಾರದು ಎಂದು ಎಚ್.ಕೆ. ಜವರೇಗೌಡ, ಪಟೇಲ್ ಶಿವರಾಮು ಹೇಳಿದ್ದರು. ಅವರ ಮಾತು ಕೇಳದೇ ಶಾಸಕನನ್ನಾಗಿ ಮಾಡಿದ್ದು ಬಹುದೊಡ್ಡ ರಾಜಕೀಯ ಪ್ರಮಾದ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಚಾರ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿ ಹಲವು ಮುಖಂಡರು ಎನ್.ಆರ್.ಸಂತೋಷ್ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದರು.

ಜೆಡಿಎಸ್ ಅಭ್ಯರ್ಥಿ ಎನ್.ಆರ್.ಸಂತೋಷ್ ಮಾತನಾಡಿ, ಕ್ಷೇತ್ರದ ಸ್ವಾಭಿಮಾನಕ್ಕಾಗಿ ಚುನಾವಣೆ ಎನ್ನುವ ಸನ್ನಿವೇಶ ನಿರ್ಮಾಣಗೊಂಡಿದೆ. ರಾಜಕೀಯ ಪುನರ್ಜನ್ಮ ನೀಡಿದ ಜೆಡಿಎಸ್ ವರಿಷ್ಠರಿಗೆ ಅಪಮಾನ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲ ಸಂಗತಿಗಳನ್ನು ಮತದಾರರ ಮುಂದಿಟ್ಟು ಚುನಾವಣೆಯಲ್ಲಿ ತಕ್ಕಪಾಠ ಕಲಿಸೋಣ ಎಂದು ಕರೆ ನೀಡಿದರು.

ತಾಪಂ ಮಾಜಿ ಸದಸ್ಯ ಹೊಸೂರು ಗಂಗಾಧರ್ ಮಾತನಾಡಿದರು. ಜೆಡಿಎಸ್ ಮುಖಂಡ ಕೆಂಕೆರೆ ಕೇಶವ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗಂಗಾಧರ್, ಎಪಿಎಂಸಿ ಮಾಜಿ ಅಧ್ಯಕ್ಷ ಹರಳಕಟ್ಟ ಶಶಿಧರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ಫ್‌ಬೋರ್ಡ್ ಜಿಲ್ಲಾಧ್ಯಕ್ಷ ಸಯ್ಯದ್ ಸಿಕಂದರ್, ನಗರಸಭೆ ಸದಸ್ಯ ಝಾಕೀರ್, ಬಿ.ಜಿ. ನಿರಂಜನ್, ಹರ್ಷವರ್ಧನ್, ವೈ.ಕೆ. ದೇವರಾಜ್, ಬಿ.ಎನ್. ವಿದ್ಯಾಧರ್,ದರ್ಶನ್, ಹರೀಶ್, ಜಯರಾಮ್ ಇತರರಿದ್ದರು.