ನರಗುಂದದಲ್ಲಿ ಹಮ್ಮಿಕೊಂಡಿದ್ದ 42ನೇ ರೈತ ಹುತಾತ್ಮ ದಿನಾಚರಣೆ ಬೃಹತ್ ಸಮಾವೇಶದಲ್ಲಿ ರೈತರ ಮಕ್ಕಳಿಗೆ ಹಸಿರು ಧ್ವಜಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಡಗಲಪುರ ನಾಗೇಂದ್ರ, ವೀರೇಶ ಸೊಬರದಮಠ, ಎಸ್.ಆರ್. ಹಿರೇಮಠ, ಶಾಂತಸ್ವಾಮಿ ಮಠ, ಶರೀಫ ಕಲಬುರ್ಗಿ, ಇತರರಿದ್ದರು.  
ಜಿಲ್ಲೆ

ಸಂಘಟಿತರಾಗಿ ಹೋರಾಟ ಕೈಗೊಳ್ಳಿ

ನರಗುಂದ: ಕೇಂದ್ರ ಸರ್ಕಾರಕ್ಕೆ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ. ಹೀಗಾಗಿ ದೇಶದ ಒಳಗಡೆ ನಿರಂತರ ಜ್ವಾಲಾಮುಖಿ ಕುದಿಯುತ್ತಿದೆ. ರೈತರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ರಾಜಕಾರಣ ಮತ್ತಷ್ಟು ವಿಜೃಂಭಿಸಲಿದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಹೇಳಿದರು.
42ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ, ರೈತಸೇನಾ ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಸಮಾವೇಶ ವೇದಿಕೆಯಲ್ಲಿ ಅವರು ಮಾತನಾಡಿದರು. ‘ಸರ್ಕಾರ ಬೆಂಬಲ ಬೆಲೆ ನೀಡುವ ಮಾತುಗಳನ್ನಾಡುತ್ತಿರುವುದು ಅರ್ಥಹೀನ. ರಾಜ್ಯ ಸರ್ಕಾರ ಕರಾಳ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆದುಕೊಳ್ಳಬೇಕು. ಪ್ರಾಮಾಣಿಕ ರೈತ ಸಂಘಟನೆಗಳಿಗೆ ಸಮಾಜದಲ್ಲಿ ಬೆಲೆ ಇಲ್ಲದಂತಾಗಿದೆ. ರೈತರು ಎಚ್ಚೆತ್ತುಕೊಂಡು ಪ್ರಾಮಾಣಿಕ ಹೋರಾಟಗಾರರನ್ನು ಬೆಂಬಲಿಸಬೇಕು’ ಎಂದು ಹೇಳಿದರು.
ರೈತಸೇನಾ ಕರ್ನಾಟಕ ಅಧ್ಯಕ್ಷ ವೀರೇಶಸ್ವಾಮಿ ಸೊಬರದಮಠ ಮಾತನಾಡಿ, ಜಾತಿ, ಧರ್ಮದ ಬಗ್ಗೆ ಹೊಡೆದಾಟಕ್ಕೆ ಹಚ್ಚುವ ರಾಜಕಾರಣಿಗಳ ಬಗ್ಗೆ ರೈತರು ಎಚ್ಚರಿಕೆಯಿಂದಿರಬೇಕು. ನಿರಂತರ ಮಳೆ ಸುರಿಯುತ್ತಿದ್ದರೂ ಕೆಲವೆಡೆ ಕುಡಿಯಲು ನೀರೂ ಸಿಗುತ್ತಿಲ್ಲ. 230 ರೈತರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದರಿಂದ ನಮ್ಮ ರಾಜ್ಯಕ್ಕೆ ನೀರು ಹಂಚಿಕೆಯಾಗಿದೆ. ಅರಣ್ಯನಾಶದ ಕುಂಟು ನೆಪ ಹೇಳಿ ಸರ್ಕಾರ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಇದಕ್ಕೆ ಪರ್ಯಾಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ರೈತರಿಂದ 10 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ, ನಾಗರತ್ನಾ ಪಾಟೀಲ, ಎಸ್.ಆರ್. ಹಿರೇಮಠ, ಬಡಗಲಪುರ ನಾಗೇಂದ್ರ, ನೂರ್ ಶ್ರೀಧರ, ಜೆ.ಎಂ. ವೀರಸಂಗಯ್ಯ, ಬಿ.ಎಸ್. ಸೊಪ್ಪಿನ, ರವಿಕುಮಾರ ಮಾಳಿಗೇರ, ಎಚ್., ಮೀನಾಕ್ಷಿ, ಮಾತನಾಡಿದರು.
ಸರ್ಕಾರದ ಮುಂದೆ 16 ಬೇಡಿಕೆ: ನ್ಯಾಯಾಧಿಕರಣದಿಂದ ನಮ್ಮ ರಾಜ್ಯಕ್ಕೆ ಹಂಚಿಕೆಯಾಗಿರುವ 13.5 ಟಿಎಂಸಿ ನೀರು ಪಡೆದುಕೊಳ್ಳಲಿ ಸರ್ಕಾರ ಪ್ರಾಮಾಣಿಕ ಹೋರಾಟ ಮುಂದುವರಿಸಬೇಕು. ಭೂಸ್ವಾಧೀನ, ಎಪಿಎಂಸಿ, ಜಾನುವಾರು ಹತ್ಯೆ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಹಿಂಪಡೆಯಬೇಕು. 2023ರ ವಿದ್ಯುತ್ ತಿದ್ದುಪಡಿ ಕಾಯ್ದೆ ಕರಡು ಮಂಡಿಸದಿರಲು ಸರ್ಕಾರ ನೀಡಿರುವ ಭರವಸೆ ಈಡೇರಿಸಬೇಕು. ಎಂಬಿತ್ಯಾದಿ 16 ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಸಲ್ಲಿಸುವ ಮೂಲಕ ಸಣ್ಣಪುಟ್ಟ ಗೊಂದಲದ ಮಧ್ಯೆ ಮಹದಾಯಿ ಅಂತಿಮ ಹೋರಾಟಕ್ಕೆ ಗುರುವಾರ ಹೊಸ ಅಧ್ಯಾಯ ಪ್ರಾರಂಭಿಸಲಾಯಿತು.