ಚಿತ್ರದುರ್ಗ: ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಸವಾಲುಗಳನ್ನು ಎದುರಿಸಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಜೀವಿಸುವ ಹಕ್ಕಿಗಾಗಿ ಧ್ವನಿ ಎತ್ತಬೇಕಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ರಾಜ್ಯ ಉಪಾಧ್ಯಕ್ಷೆ ಡಾ.ಸೀಮಾ ದೇಶಪಾಂಡೆ ಹೇಳಿದರು.
ಎಐಎಂಎಸ್‌ಎಸ್ ಜಿಲ್ಲಾ ಘಟಕದಿಂದ ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಮಹಿಳೆಯರ ಆರೋಗ್ಯ, ಶಿಕ್ಷಣ, ಸುರಕ್ಷತೆ ಮತ್ತು ಆರ್ಥಿಕ ಭದ್ರತೆ ಖಾತ್ರಿಪಡಿಸಿ ಎಂಬ ಘೋಷವಾಕ್ಯದೊಂದಿಗೆ ಮಹಿಳಾ ದಿನ ಆಚರಿಸಲಾಗುತ್ತಿದೆ. ಸ್ತ್ರೀ ಕುಲದ ಪರ ಹೋರಾಡಿದ ರಾಜಾರಾಮ್ ಮೋಹನ್‌ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಜ್ಯೋತಿಬಾ ಫುಲೆ ಹಾಗೂ ಸಾಧಕಿಯರಾದ ಮೇರಿ ಕ್ಯೂರಿ, ಸಾವಿತ್ರಿಬಾಯಿ ಫುಲೆ, ಡಾ.ಆನಂದಬಾಯಿ ಜೋಶಿ ಮೊದಲಾದ ಮಹನೀಯರ ಜೀವನಾದರ್ಶಗಳು ಹೋರಾಟಕ್ಕೆ ಸ್ಫೂರ್ತಿಯಾಗಬೇಕಿದೆ ಎಂದು ಸಲಹೆ ನೀಡಿದರು.
ವಯೋಮಿತಿ ಇಲ್ಲದೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ, ಗುಂಪು ಅತ್ಯಾಚಾರಗಳು ಮತ್ತು ಕೊಲೆ ಇಂಥ ಹೀನಾಯ ಕೃತ್ಯಗಳು ದಿನೇ ದಿನೆ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಪಿಡುಗುಗಳನ್ನು ಕಿತ್ತೊಗೆಯಲು ಪ್ರಜಾತಾಂತ್ರಿಕ ಮೌಲ್ಯಗಳನ್ನು ಬೆಳೆಸಬೇಕು. ಅದಕ್ಕಾಗಿ ಜನತಾಂತ್ರಿಕ ಆಂದೋಲನದ ಅವಶ್ಯಕತೆ ಇದೆ ಎಂದರು.
ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ಮಾತನಾಡಿ, ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಸಮಾಜದ ಏಳಿಗೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ಇದೇ ವೇಳೆ ಲೇಖಕಿ ಶರೀಫಾಬಿ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಡಿ.ಸುಜಾತಾ, ಪ್ರೊ.ಎಂ.ಎಸ್.ಪರಮೇಶ್ವರ್, ಬಿ.ವೈ.ಶ್ವೇತಾ, ಪ್ರೊ.ಶಿವಕುಮಾರ್, ಎಐಎಂಎಸ್‌ಎಸ್ ಜಿಲ್ಲಾ ಘಟಕದ ಸಹಸಂಚಾಲಕಿ ಕುಮುದಾ ಇತರರಿದ್ದರು.