ಜಿಲ್ಲೆ

ಸಂಘಟಿತ ಸಮಾಜದ ಅಸ್ತಿತ್ವ ಬಲಿಷ್ಠ

ಕಲಬುರಗಿ: ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನು ಸೇರಿ ಹಲವು ಸಮಸ್ಯೆ ಬಗೆಹರಿಸಲು ಎಲ್ಲರೂ ಸಂಕಲ್ಪ ಮಾಡಬೇಕು. ಸಂಘಟಿತ ಸಮಾಜಕ್ಕೆ ಮಾತ್ರ ಅಸ್ತಿತ್ವ ಬಲಿಷ್ಠವಾಗಿ ಇರಲಿದೆ ಎಂದು ಗುಲ್ಬರ್ಗ ವಿವಿ ಹಿಂದಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಪರಿಮಳಾ ಅಂಬೇಕರ್ ಪ್ರತಿಪಾದಿಸಿದರು.

ನಗರದ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಸಭಾ ಭವನದಲ್ಲಿ ಜಿಲ್ಲಾ ಮುನ್ನೂರು ರೆಡ್ಡಿ ಸಮಾಜ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಕಲಬುರಗಿ ವಿಭಾಗದ ಪ್ರಥಮ ವಧು-ವರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎಷ್ಟೇ ಆಧುನಿಕತೆ ಬೆಳೆದರೂ ವಧು-ವರರ ಸಮಾವೇಶ ಅವಶ್ಯ ಮತ್ತು ಅನಿವಾರ್ಯ. ಉತ್ತಮ ಸಂಬಂಧ ಬೆಸೆಯಲು ಸಮಾವೇಶ ಸಹಕಾರಿ ಎಂದರು.

ಜಾತಿ, ಸಮುದಾಯದ ಮತ್ತು ಪಾಲಕರ ಸಮ್ಮುಖದಲ್ಲಿ ಬೆಸೆಯುವ ವೈವಾಹಿಕ ಸಂಬಂಧ ಗಟ್ಟಿಗೊಳ್ಳುತ್ತವೆ. ಪ್ರಸ್ತುತ ಯಾವ ಜಾತಿಯವರು, ಎಷ್ಟು ಶಿಕ್ಷಣ ಕಲಿತವರು ಎಂಬುದು ಪಕ್ಕದ ಮನೆಯಲ್ಲಿದ್ದರೂ ಗೊತ್ತಾಗುವುದಿಲ್ಲ. ಇಂತಹ ಸಮಾವೇಶಗಳು ಮುಖಾ ಮುಖಿ ಭೇಟಿಗೆ ವೇದಿಕೆಯಾಗಿವೆ ಎಂದರು.

ರಾಯಚೂರಿನ ಮಾಜಿ ಶಾಸಕ ಹಾಗೂ ಸಮಾಜದ ಮುಖಂಡ ಎ.ಪಾಪಾರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಸಮಾವೇಶ ಸಂಘಟಿಸುತ್ತಿರುವುದು ಉತ್ತಮ ಬೆಳವಣಿಗೆ. ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಾತ್ರ ನಮ್ಮ ಸಮಾಜ ಅಧಿಕ ಸಂಖ್ಯೆಯಲ್ಲಿದೆ. ರಾಯಚೂರು ಜಿಲ್ಲೆಯಲ್ಲಿಯೇ ೨೫ ಸಾವಿರ ಜನಸಂಖ್ಯೆ ಇದೆ. ಮುನ್ನೂರು, ಮುನ್ನೂರು ರೆಡ್ಡಿ, ಮುನ್ನೂರು ಕಾಪು, ತುಳೇರ, ಉಪ್ಪಾರ ಎಂಬ ಪರ್ಯಾಯ ಪದಗಳಿಂದ ಸಮಾಜವನ್ನು ಗುರುತಿಸಲಾಗುತ್ತಿದೆ. ಸಮಾಜದ ಸಂಘಟನೆ ಶಕ್ತಿಯುತವಾಗಿ ಬೆಳೆಯಬೇಕು ಎಂದರು.

ಸಮಾವೇಶದಲ್ಲಿ ರಾಯಚೂರಿನ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಸಮಾಜದ ಗೌರವ ಅಧ್ಯಕ್ಷ, ಮಕ್ಕಳ ತಜ್ಞ ಡಾ.ನಾಗನಾಥ ಗಚ್ಚಿನಮನಿ, ಸಮಾಜದ ಮುಖಂಡರಾದ ಶಿವರಾವ ಮಕಾಸಿ, ಮುರುಗೇಂದ್ರರೆಡ್ಡಿ, ಬಸವರಾಜ ಪಾಟೀಲ್, ಚಂದ್ರಕಾಂತ ರೆಡ್ಡಿ ವೈಜಾಪುರ ಇತರರಿದ್ದರು. ಸಮಾಜದ ಜಿಲ್ಲಾಧ್ಯಕ್ಷ ವಾಸುದೇವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ.ಸೀತಾರಾಮ ಮುನ್ನೂರ ಪ್ರಾಸ್ತಾವಿಕ ಮಾತನಾಡಿದರು. ಸಂಪರ್ಕಾಧಿಕಾರಿ ಶಂಕರರೆಡ್ಡಿ ಗ್ವಾನ ಸ್ವಾಗತಿಸಿದರು.