ಚಿತ್ರದುರ್ಗ: ಸರ್ಕಾರಿ ನೌಕರರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿಲ್ಲವಾದರೂ, ಸಂಘಟನೆ, ಹೋರಾಟದ ಮೂಲಕ ಕಡಿಮೆ ಮಾಡಬಹುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ತರಾಸು ರಂಗಮಂದಿರದಲ್ಲಿ ಸೋಮವಾರ ಸಂಘದ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆ, ನೌಕರರಿಗೆ ನಾಯಕತ್ವ ಗುಣ, ವ್ಯಕ್ತಿತ್ವ ವಿಕಸನ ಕಾರ್ಯಗಾರ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏಳನೇ ವೇತನ ಆಯೋಗ ಜಾರಿಗೆ ಸಂಘ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸಿಎಂ ಸ್ಪಂದಿಸಿದ್ದು, ಸಿದ್ದರಾಮಯ್ಯ ಅವರಿಗೆ ಆ. 17ರಂದು ಸಂಘದಿಂದ ಸನ್ಮಾನಿಸಲಾಗುವುದು. ಈವರೆಗೆ ಒಟ್ಟು 25 ಆದೇಶಗಳನ್ನು ಸರ್ಕಾರದಿಂದ ಜಾರಿಗೊಳಿಸುವಲ್ಲಿ ಸಫಲರಾಗಿದ್ದೇವೆ. ಕಳೆದ 5 ವರ್ಷದಲ್ಲಿ ನೌಕರರ ಸಂತೋಷ, ನೆಮ್ಮದಿ ಕಾಯುವಲ್ಲಿ ಸಂಘ ಶ್ರಮಿಸಿದೆ ಎಂದರು.
ಡಿಸಿ, ಎಸಿ, ವೈದ್ಯ, ಇಂಜಿನಿಯರ್, ಪೊಲೀಸ್, ಉದ್ಯಮಿ ಆಗದಿದ್ದರೂ ಪರವಾಗಿಲ್ಲ. ನಿಮ್ಮ ಮಕ್ಕಳನ್ನು ದೇಶ ಮತ್ತು ಸಮಾಜಕ್ಕೆ ಉತ್ತಮ ಸತ್ಪ್ರಜೆಗಳನ್ನಾಗಿಸಿ. ಗುರು-ಹಿರಿಯರಲ್ಲಿ ಗೌರವ, ದೇವರಲ್ಲಿ ಭಕ್ತಿ ಇರಲಿ. ಅವಕಾಶ ಬಳಸಿಕೊಂಡು ಮುನ್ನುಗ್ಗುವ ಪ್ರವೃತ್ತಿ ಬೆಳೆಸಿ. ನೌಕರರು ನೊಂದವರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡಿ ಎಂದು ಸಲಹೆ ನೀಡಿದರು
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವ್ಯಕ್ತಿತ್ವ ಎಂಬುದು ತುಂಬಾ ಮುಖ್ಯ. ಆದರೆ, ಹೆಚ್ಚಾಗಿ ವಿಕಸನದ ಕಡೆಗಷ್ಟೇ ಯೋಚಿಸುತ್ತಿದ್ದೇವೆ. ಆದ್ದರಿಂದ ಸರ್ಕಾರಿ ನೌಕರರು ಮತ್ತೊಬ್ಬರಿಗೆ ಮಾದರಿಯಾಗಿರಬೇಕು. ನಡೆ, ನುಡಿಗಳಿಂದ ವ್ಯಕ್ತಿತ್ವ ಇಮ್ಮಡಿಗೊಳ್ಳಲು ಸಾಧ್ಯವಿದ್ದು, ಅದರಂತೆ ನಡೆದುಕೊಳ್ಳಿ ಎಂದರು.
ಅನಪೇಕ್ಷಿತ ಆಸೆಗಳಿಗೆ ಬಲಿಯಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು. ಜವಾಬ್ದಾರಿಯುತ ನೌಕರರಾಗಿ ಸರಿಯಾದ ಚೌಕಟ್ಟನ್ನು ಹಾಕಿಕೊಳ್ಳಿ. ಒತ್ತಡ ಮುಕ್ತ ಜೀವನದಿಂದ ಹೊರಬಂದು, ಪ್ರಾಮಾಣಿಕ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ಇದೇ ವೇಳೆ ಸರ್ಕಾರಿ ನೌಕರರ 213 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ರಾಜ್ಯ ಸಂಘದ ಖಜಾಂಚಿ ಸಿದ್ದರಾಮಣ್ಣ, ಹಿರಿಯ ಉಪಾಧ್ಯಕ್ಷ ಎಸ್.ಬಸವರಾಜ್, ಕಾರ್ಯದರ್ಶಿ ನೆಲ್ಕುದ್ರಿ ಸದಾನಂದ, ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಜಿಲ್ಲಾ ಖಜಾಂಚಿ ವೀರೇಶ್, ವ್ಯಕ್ತಿತ್ವ ವಿಕಸನ ತರಬೇತುದಾರ ಹೊಸದುರ್ಗದ ಎಚ್.ಎಸ್.ನವೀನ್‌ಕುಮಾರ್, ಡಿಡಿಪಿಐ ಎಂ.ಆರ್.ಮಂಜುನಾಥ್, ಬಿಇಒ ನಾಗಭೂಷಣ್, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಅಭಿನವ್ ಇತರರಿದ್ದರು.