ಜಿಲ್ಲೆ

ಸಂಘಟನೆ, ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

ಮಳವಳ್ಳಿ: ಪಟ್ಟಣದಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಕಾರಣನಾದವನಿಗೆ ಮರಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ ಶ್ರುಕವಾರವೂ ವಿವಿಧ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳಿಂದ ಪ್ರತಿಭಟನೆಗಳು ನಡೆದವು.


ಪಟ್ಟಣದ ಆದರ್ಶ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೂರ್ತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಬಾಲಕಿ ನಿವಾಸಕ್ಕೆ ತೆರಳಿ ಪಾಲಕರಿಗೆ ಸಾಂತ್ವನ ಹೇಳಿದರು. ನಂತರ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿ, ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘೋರ ಕೃತ್ಯ ಇದಾಗಿದೆ. ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.


ಪ್ರಸ್ತುತ ದಿನಗಳಲ್ಲಿ ಕಲಿಕಾ ಕೇಂದ್ರಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ಮತ್ತು ಸರ್ಕಾರೇತರ ಎಲ್ಲ ಶಿಕ್ಷಣ ಕೇಂದ್ರಗಳ ಮೇಲೆ ನಿಗಾವಹಿಸುವಂತೆ ಸರ್ಕಾರ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ರಾಜ್ಯ ಎಸ್ಸಿ ವಿಭಾಗದ ಕಾರ್ಯದರ್ಶಿ ವಿಜಯ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಮೇಶ್, ಜಿಪಂ ಮಾಜಿ ಸದಸ್ಯ ಪೂರಿಗಾಲಿ ಜಯರಾಜು, ತಾಪಂ ಮಾಜಿ ಸದಸ್ಯ ಶಿವಲಿಂಗಯ್ಯ, ಪುರಸಭೆ ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಲುವರಾಜು ಇತರರಿದ್ದರು.

ಆಟೋಗಳ ರ‌್ಯಾಲಿ
ಪಟ್ಟಣದಲ್ಲಿರುವ ಎಲ್ಲ ಆಟೋ ನಿಲ್ದಾಣಗಳ ಚಾಲಕರು, ಮಾಲೀಕರು ಸ್ವಯಂ ಪ್ರೇರಿತವಾಗಿ ಆಟೋರಿಕ್ಷಾಗಳ ಮೂಲಕ ಪ್ರತಿಭಟನಾ ರ‌್ಯಾಲಿ ನಡೆಸಿದರು.

ಶಾಂತಿ ಕಾಲೇಜು ಸಮೀಪದಿಂದ ನೂರಾರು ಆಟೋಗಳ ಮೂಲಕ ಮೈಸೂರು ಮುಖ್ಯ ರಸ್ತೆಯಲ್ಲಿ ರ‌್ಯಾಲಿ ನಡೆಸಿದರು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಗಂಗರಾಜೇ ಅರಸು, ನಾಗರಾಜು, ಮುಖಂಡರಾದ ಉಮೇಶ್, ಮಂಜುನಾಥ್, ಮುತ್ತುರಾಜು, ಜಗದೀಶ, ಶಿವರಾಜು ಇದ್ದರು.

ಭಾರತೀಯ ಕಿಸಾನ್ ಸಂಘ
ಭಾರತೀಯ ಕಿಸಾನ್ ಸಂಘದಿಂದ ತಾಲೂಕು ಅಧ್ಯಕ್ಷ ಆರ್.ಪಿ.ರಾಜಶೇಖರ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಎಂ.ವಿಜಯವಣ್ಣ ಅವರಿಗೆ ಮನವಿ ಸಲ್ಲಿಸಿದರು. ಪ್ರಾಂತ ಸಂಘಟನಾ ಕಾರ್ಯದರ್ಶಿ ರಮೇಶ್, ಜಿಲ್ಲಾ ಕಾರ್ಯದರ್ಶಿ ಬಸವರಾಜು, ತಾಲೂಕು ಕಾರ್ಯದರ್ಶಿ ವಿನಯ್, ಪುಟ್ಟಮ್ಮ, ನಿರ್ಮಲಾ ಇದ್ದರು. ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.