ವಿಕ್ರಮ ನಾಡಿಗೇರ ಧಾರವಾಡ
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷ ಇಡೀ ರಾಜ್ಯದಲ್ಲೇ ಅತ್ಯಲ್ಪ ಸ್ಥಾನ ಗಳಿಸಿ ಹೀನಾಯ ಸ್ಥಿತಿಗೆ ತಲುಪಿದೆ. ಇದಕ್ಕೆ ಜಿಲ್ಲೆಯೂ ಹೊರತಾಗಿಲ್ಲ. ಈ ಹಿಂದೆ ಮತದಾರರು ಅಲ್ಪಸ್ವಲ್ಪ ಒಲವು ತೋರುತ್ತಿದ್ದರು. 2 ಚುನಾವಣೆಗಳಲ್ಲಿ ಮತದಾರ ಸಹ ಕೈ ಕೊಟ್ಟಿದ್ದರಿಂದ ದುಸ್ಥಿತಿಗೆ ಬಂದಿದೆ.
ಪ್ರಸಕ್ತ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಮೂವರು ಜೆಡಿಎಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರು 1,000 ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ನವಲಗುಂದ ಕ್ಷೇತ್ರದ ಕೆ.ಎನ್. ಗಡ್ಡಿ 6,914 ಮತ ಪಡೆದಿದ್ದರೆ, ಕುಂದಗೋಳದ ಹಜರತಲಿ ಶೇಖ್ ಜೋಡಮಾನಿ 4,304, ಹು-ಧಾ ಪಶ್ಚಿಮದ ಗುರುರಾಜ ಹುಣಸಿಮರದ 1,195 ಮತಗಳನ್ನು ಪಡದಿದ್ದಾರೆ. ಉಳಿದಂತೆ ಧಾರವಾಡದ ಮಂಜುನಾಥ ಹಗೇದಾರ 921, ಹು-ಧಾ ಪೂರ್ವದಲ್ಲಿ ವೀರಭದ್ರಪ್ಪ ಹಾಲಹರವಿ 900, ಹು-ಧಾ ಸೆಂಟ್ರಲ್ನ ಮಹಾಂತ ಒಡೆಯರ ಸಿದ್ದಲಿಂಗೇಶ್ವರಗೌಡ 513 ಹಾಗೂ ಕಲಘಟಗಿಯಲ್ಲಿ ವೀರಪ್ಪ ಬಸಪ್ಪ ಶೀಗಿಗಟ್ಟಿ 891 ಮತಗಳನ್ನು ಪಡೆದಿದ್ದಾರೆ.
ಚುನಾವಣೆಯಲ್ಲಿ 8,636 ನೋಟಾ ಚಲಾವಣೆಯಾಗಿದ್ದರೆ, 1,851 ಮತಗಳು ತಿರಸ್ಕೃತಗೊಂಡಿವೆ. ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪಡೆದ ಮತ, ನೋಟಾ ಹಾಗೂ ತಿರಸ್ಕೃತ ಮತಗಳಿಗೂ ಬಹಳ ವ್ಯತ್ಯಾಸವಿಲ್ಲ ಎಂಬುದು ವಿಪರ್ಯಾಸ. ಜಿಲ್ಲೆಯ 7 ಜೆಡಿಎಸ್ ಅಭ್ಯರ್ಥಿಗಳು ಸೇರಿ 15,638 ಮತ ಪಡೆದಿದ್ದರೆ, ನೋಟಾ ಹಾಗೂ ತರಸ್ಕೃತ ಮತ ಸೇರಿ 10,487 ಮತಗಳು.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಬೆಳೆಸಲು ಗಟ್ಟಿ ನಾಯಕರು ಇಲ್ಲದಿರುವುದು ಈ ದುಸ್ಥಿತಿಗೆ ಕಾರಣ ಎಂದರೆ ತಪ್ಪಾಗಲಾರದು. ಈ ಹಿಂದೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪಕ್ಷದಲ್ಲಿದ್ದರೂ ಹೇಳುವಂತಹ ಸಂಘಟನೆ ಆಗಿರಲಿಲ್ಲ. ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಭಾಗದಲ್ಲಿ ಪಕ್ಷ ಗಟ್ಟಿ ನೆಲೆಯೂರಿ ಹೆಚ್ಚಿನ ಸ್ಥಾನ ಪಡೆಯಲು 2016ರಲ್ಲಿ ಹುಬ್ಬಳ್ಳಿಯಲ್ಲಿ ಮನೆ ಮಾಡಿ ಪಕ್ಷ ಬೆಳೆಸಲು ಪ್ರಯತ್ನಿಸಿದ್ದರು. ಆದರೆ 2018ರ ಚುನಾವಣೆಯಲ್ಲೇ ಜಿಲ್ಲೆಯಲ್ಲಿ ಒಂದೂ ಸ್ಥಾನ ಸಿಗದೆ ವಿಫಲವಾದರು. ಹೀಗಾಗಿ ಮನೆ ಖಾಲಿ ಮಾಡಿ ಬೆಂಗಳೂರಿನತ್ತ ತೆರಳಿದರು.
2013ರ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿಗಳಲ್ಲಿ ನವಲಗುಂದದ ಎನ್.ಎಚ್. ಕೋನರಡ್ಡಿ ಮಾತ್ರ ಜಯಗಳಿಸಿದ್ದರು. ನಂತರದ ಚುನಾವಣೆ (2018)ಯಲ್ಲಿ ಇವರೂ ಸೋಲು ಕಂಡರಲ್ಲದೆ, ಬದಲಾದ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್ ಸೇರಿದರೆ, ನಂತರದಲ್ಲಿ ಪರಿಷತ್ ಚುನಾವಣೆ ಸಮಯದಲ್ಲಿ ಬಸವರಾಜ ಹೊರಟ್ಟಿ ಬಿಜೆಪಿಯತ್ತ ಮುಖ ಮಾಡಿದರು. ಹೀಗಾಗಿ ಜೆಡಿಎಸ್ಗೆ ನಾಯಕರೇ ಇಲ್ಲದಂತಾಗಿದೆ.
ಹೀಗೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಚುನಾವಣೆಯಿಂದ ಚುನಾವಣೆಗೆ ಹಿನ್ನಡೆ ಸಾಧಿಸುತ್ತಲೇ ಸಾಗಿದೆ.