ಯಳಂದೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸ್ತ್ರೀಯರಲ್ಲಿ ಆರ್ಥಿಕ ಜ್ಞಾನ ಮೂಡಿಸಿ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಎನ್. ಮಹೇಶ್ ಶ್ಲಾಘಿಸಿದರು.
ತಾಲೂಕಿನ ಯರಗಂಬಳ್ಳಿ ಗ್ರಾಮದ ಸುಷ್ಮಾ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಗುಂಬಳ್ಳಿ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯು ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ಉತ್ತಮ ಬದುಕು ಕಟ್ಟಿಕೊಡುವಲ್ಲಿ ಸಫಲವಾಗಿದೆ. ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆ, ಸ್ವಚ್ಛತೆ ಕುರಿತು ಅರಿವು, ಮದ್ಯ ವರ್ಜನ ಶಿಬಿರ ಆಯೋಜಿಸಿ ಮದ್ಯವಸನಿಗಳು ಹೊಸ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ನಿರ್ದೇಶಕಿ ಲತಾ ಬಂಗೇರ ಮಾತನಾಡಿದರು. ಒಕ್ಕೂಟದ ನಿಕಟ ಪೂರ್ವ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಲಾಯಿತು. ಯೋಜನಾಧಿಕಾರಿ ಎಂ.ಎಸ್. ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಮ್ಮ, ಮಮತಾ, ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ಮುಖ್ಯಶಿಕ್ಷಕರಾದ ಪ್ರಭುಸ್ವಾಮಿ, ವೆಂಕಟರಂಗಯ್ಯ, ಶಿವರಾಜ್ ಪ್ರವೀಣ್, ಎಎಸ್‌ಐ ಚಂದ್ರಶೇಖರ, ಸೇವಾಪ್ರತಿನಿಧಿಗಳು, ವಿಎಲ್‌ಇ ಸದಸ್ಯರು ಉಪಸ್ಥಿತರಿದ್ದರು.