ಕೊಪ್ಪ: ಸಂಘದಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತೆ ಸಹಕಾರ ಸಂಘಗಳ ನಿರ್ದೇಶಕರು ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ತಾಲೂಕಿನಲ್ಲಿ ವಿವಿಧ ಸಹಕಾರ ಸಂಘಕ್ಕೆ ಆಯ್ಕೆಯಾದ ಬಿಜೆಪಿ ಕಾರ್ಯಕರ್ತರಿಗೆ, ಎರಡನೇ ಬಾರಿಗೆ ಆಯ್ಕೆಯಾದ ಮಂಡಲ, ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ಮಂಡಲ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮುಂದಿನ ದಿನ ಸಹಕಾರ ಸಂಘದಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಹೇರೂರು, ಅಸಗೋಡು ಸೊಸೈಟಿ ಬಿಜೆಪಿ ಬೆಂಬಲಿತರು ಗೆಲ್ಲಬೇಕಿತ್ತು. ಹರಿಹರಪುರದಲ್ಲಿ ಹೆಚ್ಚು ಸ್ಥಾನ ಬರಬೇಕಿತ್ತು. ಅಧಿಕಾರದ ಎದುರು ಕೊಪ್ಪದಲ್ಲಿ 6 ಸೊಸೈಟಿ ಗೆದ್ದಿದ್ದೇವೆ. ಕ್ಷೇತ್ರದ ಶಾಸಕರ ದ್ವೇಷದ ರಾಜಕಾರಣಕ್ಕಾಗಿ ಅವರಿಗೆ ಹೆಚ್ಚು ಸೊಸೈಟಿಗಳನ್ನು ಗೆಲ್ಲಲು ಆಗಲಿಲ್ಲ ಎಂದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನನ್ನ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳೇ ಈಗಲೂ ಇವೆ. ಈಗ ನಿರ್ಮಿಸಿದ ರಸ್ತೆಗಳು ಕಿತ್ತು ಹೋಗುತ್ತಿವೆ. ಕಾಡಾನೆ ದಾಳಿಗೆ ಕ್ಷೇತ್ರದಲ್ಲಿ 3 ಮಂದಿ ಮೃತಪಟ್ಟಿದ್ದಾರೆ. ಟೆಂಟಕಲ್ ಬೇಲಿ ಹಾಕುವ ಬದಲು ರೈಲು ಹಳಿ ಬೇಲಿ ಹಾಕಿದರೆ ಉತ್ತಮ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಎಸ್.ಮಹಾಬಲ ರಾವ್ ಮಾತನಾಡಿ, ಬೇರೆ ಬೇರೆ ದೇಶಗಳು ಕೃತಕ ಬುದ್ಧಿಮತ್ತೆಯನ್ನು ಕೃಷಿಯಲ್ಲಿ ಹೇಗೆ ಅಳವಡಿಸಿಕೊಂಡಿವೆ ಎಂದು ಲಂಡನ್ ಸಂಸತ್ತಿನಲ್ಲಿ ವಿಷಯ ಮಂಡಿಸಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೇರೆ ದೇಶದಲ್ಲಿರುವ ಕೃಷಿ ತಂತ್ರಜ್ಞಾನ ನಮ್ಮ ದೇಶಕ್ಕೆ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಮೋದಿ ಅವರ ಆಡಳಿತ, ನಿರ್ಮಲಾ ಸೀತಾರಾಮನ್ ಅವರ ಆರ್ಥಿಕತೆ ದೇಶಕ್ಕೆ ಬಲ ತುಂಬಲಿದೆ ಎಂದರು.
ಎರಡನೇ ಬಾರಿಗೆ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಕೆ.ದಿನೇಶ್ ಹೊಸೂರು, ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನವೀನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸಹಕಾರ ಸಂಘಕ್ಕೆ ಆಯ್ಕೆಯಾದ ಬಿ.ಸಿ.ನರೇಂದ್ರ, ಸುಂದರಮೂರ್ತಿ, ಅರುಣ್ ಶಿವಪುರ, ಎಂ.ಪಿ.ಸಂತೋಷ್, ವಿಶ್ವನಾಥ್ ಕಲ್ಕೆರೆ ಅವರನ್ನು ಅಭಿನಂದಿಸಲಾಯಿತು.
ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳಾದ ಶ್ರುತಿ ರೋಹಿತ್, ಪದ್ಮಾವತಿ ರಮೇಶ್, ಲಲಿತಾ ನಾಗೇಂದ್ರ, ಎಚ್.ಆರ್.ಜಗದೀಶ್, ಶರತ್ ನಿಲುವಾಗಿಲು, ಸುರೇಶ್ ಇತರರಿದ್ದರು.