ನಾಪೋಕ್ಲು: ಎಲೆಮರೆ ಕಾಯಿಯಂತಿರುವ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಉತ್ತಮ ಕ್ರೀಡಾಪಟುವಾಗಲು ಸಾಧ್ಯ ಎಂದ ನಾಪೋಕ್ಲು ಕೊಡವ ಸಮಾಜದ ಗೌರವ ಕಾರ್ಯದರ್ಶಿಯೂ ಆದ ಹಿರಿಯ ಹಾಕಿ ಆಟಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಹೇಳಿದರು.
ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ಬಲ್ಲಮಾವಟಿ ವತಿಯಿಂದ ಸೋಮವಾರ ಆಯೋಜಿಸಿದ್ದ ಹಾಕಿ ತರಬೇತಿ ಉಚಿತ ಶಿಬಿರದ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದೆ ವಿದ್ಯಾರ್ಥಿಗಳಿಗೆ ಶಿಬಿರಗಳ ನೆರವು ಇರಲಿಲ್ಲ. ಶಾಲೆಗಳಲ್ಲಿ ಮಾತ್ರ ಕ್ರೀಡೆ ಕಲಿಯಬೇಕಿತ್ತು. ಇದೀಗ ಹಲವು ಸಂಘ, ಸಂಸ್ಥೆಗಳು ಮುಂದೆ ಬಂದಿದ್ದು ಮಕ್ಕಳಿಗೆ ಉತ್ತಮ ತರಬೇತಿ ಸಿಗುತ್ತಿದೆ. ಇಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯುತ್ತಿದ್ದು ಪ್ರಶಂಸನೀಯ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಾಲ್ನಾಡು ಹಾಕಿ ಕ್ಲಬ್ ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ ಮಾತನಾಡಿ, ಬಲಮಾವಟಿ, ದೊಡ್ಡಪುಲಿಕೋಟು, ನೆಲಜಿ ಮತ್ತು ಪೇರೂರು ಗ್ರಾಮಗಳ ಆಸಕ್ತ ಸಮಾನ-ಮನಸ್ಕರು ಹಾಕಿ ಕ್ಲಬ್ ಅನ್ನು ಹುಟ್ಟು ಹಾಕಿದ್ದು ಹಲವು ವರ್ಷಗಳ ಕಾಲ ನಾಲ್ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ನಾಲ್ಕುನಾಡು ವ್ಯಾಪ್ತಿಯ ಹಾಕಿ ಪಂದ್ಯಾಟಕ್ಕೆ ಕಳೆದ ವರ್ಷ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಪುನಶ್ಚೇತನ ನೀಡಿದ್ದು ಹಾಕಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಉತ್ಸವ ದೊಂದಿಗೆ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ ತರಬೇತಿ ಶಿಬಿರವು 5- 12 ಮತ್ತು 13-21 ವಯೋಮಿತಿಯವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಏಪ್ರಿಲ್ 7ರವರೆಗೆ ನಡೆಯಲಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ರಾಷ್ಟ್ರೀಯ ತೀರ್ಪುಗಾರ, ಹಿರಿಯ ಹಾಕಿ ಆಟಗಾರ ಕಾಟುಮಣಿಯಂಡ ಉಮೇಶ್ ಮತ್ತು ಗಣ್ಯರು ಶಿಬಿರ ಉದ್ಘಾಟಿಸಿದರು. ಬಳಿಕ ಶಿಬಿರಾರ್ಥಿಗಳಿಗೆ ತರಬೇತಿ ಜರುಗಿತು. ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಕ್ಲಬ್ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ , ಖಜಾಂಚಿ ಚೀಯಂಡಿರ ದಿನೇಶ್ ಗಣಪತಿ, ಸಹ ಕಾರ್ಯದರ್ಶಿ ಮಚ್ಚುರ ಯದುಕುಮಾರ್, ತರಬೇತುದಾರರಾದ ಅಂಜಪರವಂಡ ರೋಷನ್ ಮಾದಪ್ಪ, ಅಲ್ಲಾರಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ, ಪಾಲಕರು ಉಪಸ್ಥಿತರಿದ್ದರು.