ಕುಶಾಲನಗರದ ಪ್ರೋಬಸ್ ಕ್ಲಬ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾದ ಬೋಸ್ ಮೊಣ್ಣಪ್ಪಗೆ ರೋಟರಿ ಕ್ಲಬ್ ಅಧ್ಯಕ್ಷ ಉಲ್ಲಾಸ್ ಕೃಷ್ಣನ್ ಪ್ರಮಾಣಪತ್ರ ಹಸ್ತಾಂತರಿಸಿದರು. ಡಾ.ರಾಜಶೇಖರ್, ತಿಮ್ಮಯ್ಯ, ಶಿಬು ತೋಮಸ್ ಇತರರು ಇದ್ದರು. 
ಜಿಲ್ಲೆ

ಸಂಘ, ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಿ

ಕುಶಾಲನಗರ: ನೌಕರಿಯಿಂದ ನಿವೃತ್ತರಾದವರು ಮತ್ತು ಹಿರಿಯ ನಾಗರಿಕರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಪ್ರೊಬಸ್ ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಕೆ.ಎಸ್.ತಿಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುಶಾಲನಗರದ ಪ್ರೊಬಸ್ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರೋಬಸ್ ಕ್ಲಬ್ ಹಿರಿಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷ ಉಲ್ಲಾಸ್ ಕೃಷ್ಣನ್ ಮಾತನಾಡಿ, ನಿವೃತ್ತ ಜೀವನ ಎನ್ನುವ ಬದಲು ಸಂತೋಷದ ಜೀವನ ಎನ್ನುವುದು ಸೂಕ್ತ. ಕುಟುಂಬದ ಎಲ್ಲ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿರುವ ಹಿರಿಯರು, ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತೆ ಹೇಳಿದರು.

ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷರಾಗಿ ಎ.ಎನ್.ದೇವಯ್ಯ, ಕಾರ್ಯದರ್ಶಿಯಾಗಿ ಜಿ.ಕೆಂಚಪ್ಪ, ಖಜಾಂಚಿಯಾಗಿ ಎಸ್.ಎಸ್.ನಾಗರಾಜ್, ಪಿಆರ್‌ಒ ಆಗಿ ಸಿ.ಡಿ.ಮಂದಪ್ಪ ಅಧಿಕಾರ ಸ್ವೀಕರಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಶಿಬು ತೋಮಸ್, ಪ್ರೋಬಸ್ ಕ್ಲಬ್ನ ಡಾ.ಎಚ್.ಎಸ್.ರಾಜಶೇಖರ್, ಪುಲಿಯಂಡ ಚೆಂಗಪ್ಪ, ಎಂ.ರಂಗಸ್ವಾಮಿ, ಸಿ.ಎಂ.ತಿಮ್ಮಯ್ಯ, ಪ್ರಕಾಶ್, ಡ್ಯಾನಿಯಲ್ ಇತರರು ಇದ್ದರು.