ಜಿಲ್ಲೆ

ಸಂಘ-ಸಂಸ್ಥೆಗಳ ಸಹಕಾರದಿಂದ ಶೈಕ್ಷಣಿಕ ಪ್ರಗತಿ, ರಾಜಲಾಂಛನ ಸಂಸ್ಥೆ ಅಧ್ಯಕ್ಷ ನರಸಿಂಹಮೂರ್ತಿ ಅಭಿಮತ, ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ

ಆನೇಕಲ್: ಗಡಿಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳು ಸಹಕಾರ ನೀಡಿದರೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ರಾಜಲಾಂಛನ ಸಂಸ್ಥೆ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.

ತಾಲೂಕಿನ ಅತ್ತಿಬೆಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜಲಾಂಛನ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತ್ತಿಬೆಲೆ ಗಡಿಭಾಗದ ಶಾಲೆಯಾದರೂ ನೂರಾರು ವಿದ್ಯಾರ್ಥಿಗಳು ಶಿಸ್ತಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ರಾಜಲಾಂಛನ ಸಂಸ್ಥೆ ಸಹಕಾರ ನೀಡಲಿದೆ ಎಂದು ಹೇಳಿದರು.

ಹತ್ತನೇ ತಗರತಿ ಪರೀಕ್ಷೆಗೆ ಪೂರಕವಾದ ಸಾಕಷ್ಟು ಮಾಹಿತಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆಯಲ್ಲಿ ಪ್ರತಿದಿನ ಪ್ರಕಟವಾಗುತ್ತವೆ. ನಿತ್ಯವೂ ಪಠ್ಯದ ಜತೆಗೆ ಸಂಚಿಕೆಯನ್ನು ತಪ್ಪದೆ ಅಭ್ಯಾಸ ಮಾಡುವ ಮೂಲಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆಯಿಂದ ಈ ಶಾಲೆಗೆ ಎರಡನೇ ಬಾರಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಶಾಲೆಯ ಪರವಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.

10ನೇ ತರಗತಿ ಎನ್ನುವುದು ವಿದ್ಯಾರ್ಥಿ ಜೀವನದ ಬದಲಾವಣೆಯ ಪ್ರಮುಖ ಘಟ್ಟ. ಇನ್ನು 45 ದಿನಗಳು ಮಾತ್ರ ಪರೀಕ್ಷೆಗೆ ಉಳಿದಿದ್ದು, ಈ ಸಮಯವನ್ನು ಓದುವುದಕ್ಕೆ ಬಳಸಿಕೊಂಡು ಶೇ. 100 ಲಿತಾಂಶ ಪಡೆಬೇಕು ಎಂದರು.

ರಾಜ ಲಾಂಛನ ಸಂಸ್ಥೆಯ ಅತ್ತಿಬೆಲೆ ಘಟಕದ ಅಧ್ಯಕ್ಷೆ ತ್ರಿಪುರಾಸುಂದರಿ ಮಾತನಾಡಿ, ತಾಲೂಕಿನ ಪ್ರಮುಖ ಸರ್ಕಾರಿ ಶಾಲೆಗಳಿಗೆ ರಾಜಲಾಂಛನ ಸಂಸ್ಥೆ ಮುಖ್ಯಸ್ಥ, ಪೊಲೀಸ್ ಅಧಿಕಾರಿ ಎಲ್.ವೈ. ರಾಜೇಶ್ ಅವರ ನೇತೃತ್ವದಲ್ಲಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಹಾಗೂ ಶಿಕ್ಷಣ ಹಾಗೂ ಪರೀಕ್ಷೆಗೆ ಬೇಕಾದ ಪರಿಕರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜಲಾಂಛನ ಸಂಸ್ಥೆ ಸಮಿತಿ ಸದಸ್ಯರಾದ ಲಿಂಗರಾಜು, ಅತ್ತಿಬೆಲೆ ಘಟಕದ ಉಪಾಧ್ಯಕ್ಷ ರವಿ, ಸದಸ್ಯರಾದ ಹರೀಶ್, ಬಳ್ಳೂರು ಮಂಜುನಾಥ್, ಅತ್ತಿಬೆಲೆ ರವಿ, ಶಿಕ್ಷಕರಾದ ರಾಜಪ್ಪ ಮತ್ತಿತರರು ಹಾಜರಿದ್ದರು.