ಜಿಲ್ಲೆ

ಸಂಗೊಳ್ಳಿ ರಾಯಣ್ಣ ನಾಟಕೋತ್ಸವ ನಾಳೆ

ದಾವಣಗೆರೆ: ಶ್ರೀಶೈಲ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘದ ವಾರ್ಷಿಕೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕೋತ್ಸವ ಕಾರ್ಯಕ್ರಮ ಜೂ.11 ರಂದು ಸಂಜೆ 6 ಗಂಟೆಗೆ ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಎಚ್.ಜಿ. ಉಮೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೀಲಗುಂದ ಜಂಗಮಪೀಠದ ಶ್ರೀ ಚನ್ನಬಸವ ಶಿವಯೋಗಿಗಳ ಸಾನಿಧ್ಯದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದರು. ವಿಶೇಷ ಆಹ್ವಾನಿತರಾಗಿ ಸಂಸದ ಜಿ.ಎಂ. ಸಿದ್ದೇಶ್ವರ, ಎಐಟಿಯುಸಿ ಜಿಲ್ಲಾಧ್ಯಕ್ಷ ವಿ. ಲಕ್ಷ್ಮ್ಮಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಚಿಂದೋಡಿ ಚಂದ್ರದರ ಹಾಗೂ ಜಿಲ್ಲೆಯ ಶಾಸಕರು ಪಾಲ್ಗೊಳ್ಳುವರು. ಇದೇ ವೇಳೆ ಕಲಾ ಸೇವೆ ಮಾಡಿದ 45 ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಕಲಾವಿದರ ಮಾಸಾಶನ ಹೆಚ್ಚಳ, ಕೊಂಡಜ್ಜಿಯಲ್ಲಿ ರಂಗ ತರಬೇತಿ ಕೇಂದ್ರ, ಕುಂಠಿತಗೊಂಡಿರುವ ರಂಗಮಂದಿರ ನಿರ್ಮಾಣಕ್ಕೆ ವೇಗ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನೀಲಗುಂದ ಬಸವನಗೌಡ್ರು, ಮುದಹದಡಿ ನಾಗರಾಜಪ್ಪ, ಶಿವಕುಮಾರ್ ಶೆಟ್ಟರ್, ಖಾದರ್ ಇತರರಿದ್ದರು.

----