ಜಿಲ್ಲೆ

ಸಂಗೂರ ಕಾರ್ಖಾನೆ ಎದುರು ಕಾರ್ವಿುಕರ ಪ್ರತಿಭಟನೆ

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಸಂಗೂರನಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಯ ಎದುರು ಕಾರ್ವಿುಕರು, ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದು, ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಹೊರ ರಾಜ್ಯದ ಜನರನ್ನು ಸೇರಿಸಿಕೊಂಡಿದ್ದಾರೆ. ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ವಿಆರ್​ಎಸ್ ನೀಡಿ 8 ವರ್ಷ ಕಳೆದರೂ ಆಗ ಆಗಿದ್ದ ಒಪ್ಪಂದದ ಪ್ರಕಾರ ಬಾಕಿ ಉಳಿದಿರುವ ಹಣವನ್ನು ನೀಡುತ್ತಿಲ್ಲ. ಕಾರ್ಖಾನೆಯ ಮ್ಯಾನೇಜರ್ ಮತ್ತು ಗುತ್ತಿಗೆದಾರರು ಕಾರ್ವಿುಕರನ್ನು ಯಾಮಾರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು.

ಸಂಗೂರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಜಿಎಂ ಶುಗರ್ಸ್ ಎನರ್ಜಿ ಲಿ. ಅವರು ಕಾರ್ವಿುಕರು ಹಾಗೂ ರೈತರಿಗೆ ಅನ್ಯಾಯ ಮಾಡುತ್ತ ಬಂದಿದ್ದಾರೆ. ಕಾರ್ಖಾನೆ ನಿರ್ವಣಕ್ಕೆ ಭೂಮಿ ನೀಡಿದ ರೈತರ ಮಕ್ಕಳಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡುತ್ತೇವೆ ಎಂದು ಒಪ್ಪಂದಲ್ಲಿ ತಿಳಿಸಲಾಗಿದೆ. ಆದರೆ ಕಾರ್ಖಾನೆಗೆ ಜಮೀನು ನೀಡಿದ ರೈತರ ಮಕ್ಕಳಿಗೆ ಯಾವುದೇ ಕೆಲಸವನ್ನು ನೀಡುತ್ತಿಲ್ಲ. ಈ ಕೂಡಲೆ ಭೂಮಾಲೀಕರ ಮಕ್ಕಳಿಗೆ ಕೆಲಸ ಒದಗಿಸಬೇಕು ಎಂದರು.

ಕಬ್ಬಿಗೆ ಅಂತಿಮ ದರ ನಿಗದಿಪಡಿಸಬೇಕು. ಕೆಲಸದಿಂದ ತೆಗೆದುಹಾಕಿದ್ದ ಕಾರ್ವಿುಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಹೊರ ರಾಜ್ಯದಿಂದ ಕೆಲಸಕ್ಕೆ ಬಂದಿದ್ದ ಕಾರ್ವಿುಕರನ್ನು ತಕ್ಷಣ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಕಾರ್ಖಾನೆ ಮ್ಯಾನೇಜರ್ ಜತೆ ಕಾರ್ವಿುಕರು ವಾಗ್ವಾದ ನಡೆಸಿ, ‘ಕಾರಣವಿಲ್ಲದೇ ಕೆಲಸದಿಂದ ಏಕೆ ತೆಗೆದಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಮ್ಯಾನೇಜರ್ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು ಎಂದು ಕಾರ್ವಿುಕರು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸಪ್ಪ ನೆಗಳೂರ, ಶಂಕರಗೌಡ ಸುಂಕದ, ಮಂಜಪ್ಪ ಪುಟ್ಟಣ್ಣನವರ, ಲೋಹಿತಪ್ಪ ಹೊಂಕಳದ, ಮಲ್ಲೇಶಪ್ಪ ಹೋತನಹಳ್ಳಿ, ಸಿದ್ದಲಿಂಗಪ್ಪ ಕ್ಯಾಲಕೊಂಡ, ರಮೇಶ ಬಕ್ಕಣ್ಣನವರ, ಎಸ್.ವಿ. ಸವೂರ, ಪಿ.ಎಸ್. ಪೂಜಾರ, ಆರ್.ಆರ್. ಕುಲಕರ್ಣಿ, ಎಸ್.ಕೆ. ಪಾಟೀಲ ಇತರರು ಪ್ರತಿಭಟನೆಯಲ್ಲಿದ್ದರು.