ಅರಕಲಗೂಡು: ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 20ನೇ ವಾರ್ಷಿಕ ಸಂಗೀತೋತ್ಸವದ ಮೂರನೇ ದಿನವಾದ ಶುಕ್ರವಾರ ಪ್ರಸಿದ್ಧ ವಿದ್ವಾಂಸರು ಪ್ರಸ್ತುತ ಪಡಿಸಿದ ಗಾಯನ ಕಛೇರಿ ಸಂಗೀತಾಸಕ್ತರನ್ನು ನಾದಲೋಕದಲ್ಲಿ ತೇಲಿಸಿತು.
ವಿದ್ವಾನ್ ಎಸ್.ಆರ್.ವಿನಯ್ ಶರ್ಮ ಬೆಳಗ್ಗೆ 10.30ರಂದಿ ಮಧ್ಯಾಹ್ನ ಒಂದು ಗಂಟೆವರೆಗೆ ನಿರಂತರವಾಗಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸರಸೂಡ ವರ್ಣ, ರಾಗ ಸಾವೇರಿ, ತ್ಯಾಗರಾಜರು ರಚಿಸಿದ ಮನಸು ಲೋನಿ ಕೃತಿಯನ್ನು ಹಿಂದೋಳ ರಾಗದಲ್ಲಿ, ನಾಸಿಕ ಭೂಷಣ ರಾಗದಲ್ಲಿ ಜಯಮಾತೆ ಶಾರದೆ, ಶ್ಯಾಮಶಾಸ್ತ್ರಿಗಳು ರಚಿಸಿದ ಓ ಜಗದಂಬ ಕೃತಿಯನ್ನು ಆನಂದ ಭೈರವಿ ರಾಗ, ತ್ಯಾಗರಾಜರ ಕೊಲು ವೈ ಕೊಡಪನಿ ಕೃತಿಯನ್ನು ದೇವಗಂಧಾರಿ ರಾಗ, ಕಲಿಗೆಯುಂಟೇ ಗದ ಕೃತಿಯನ್ನು ಕೀರವಾಣಿ ರಾಗ, ಮುದ್ದು ಗಾರಿ ಯಶೋಧ ಕೃತಿಯನ್ನು ಜುಂಜುಟಿ ರಾಗ ಹಾಗೂ ದೇವ ಬಂದ ನಮ್ಮ ಸ್ವಾಮಿ ಬಂದ ಗೀತೆಯನ್ನು ಮಾಂಡ್ ರಾಗದಲ್ಲಿ ಹಾಡಿದರು.
ವಿನಯ್ ಶರ್ಮ ಅವರ ಗಾಯನಕ್ಕತೆ ತಕ್ಕಂತೆ ವಿದ್ವಾನ್ ಕೇಶವ ಮೋಹನ್ ಕುಮಾರ್ ಪಿಟೀಲು, ಅನೂಪ್ ಅನಂತ ಕೃಷ್ಣ ಶರ್ಮ ಮೃದಂಗ ಮತ್ತು ಭಾರದ್ವಾಜ್ ಆರ್.ಸಾತವಲ್ಲಿ ಮೋರ್ಚಿಂಗ್ ನುಡಿಸಿ ಸಾತ್ ನೀಡಿದರು.
ಸಂಜೆ 4.15ರಿಂದ 6.15 ವರೆಗೆ ವಿದ್ವಾನ್ ಶಿಲ್ಪಾ ಶಶಿಧರ್ ಮತ್ತು ಅಶ್ವಿನಿ ಸತೀಶ್ ನಡೆಸಿಕೊಟ್ಟ ಯುಗಳ ಗಾಯನ ನಾದಲೋಕವನ್ನೇ ಸೃಷ್ಟಿಸಿತು. ವಿದ್ವಾನ್ ಅಚ್ಯುತ್ ರಾವ್ ಪಿಟೀಲು, ಸಿ. ಚೆಲುವರಾಜ್ ಮೃದಂಗ ಮತ್ತು ಗುರುಮೂರ್ತಿ ಘಟ ನುಡಿಸಿ ಸಂಗೀತ ಸುಧೆ ಹರಿಸಿದರು.
ಬಳಿಕ 6.45ರಿಂದ ರಾತ್ರಿ 9 ಗಂಟೆವರೆಗೆ ಸತತವಾಗಿ ವಿದ್ವಾನ್ ಕೆ.ಭರತ್ ಸುಂದರ್ ಗಾಯಕ ಕಾರ್ಯಕ್ರಮ ಪ್ರಸ್ತುತ ಪಡಿಸಿ ಜನರನ್ನು ರಂಜಿಸಿದರು. ವಿದ್ವಾನ್ ಎಚ್.ಎನ್.ಭಾಸ್ಕರ್ ಪಿಟೀಲು, ಅರ್ಜುನ್ ಕುಮಾರ್ ಮೃದಂಗ ಮತ್ತು ಜಿ.ಎಸ್.ರಾಮಾನುಜನ್ ಘಟ ನುಡಿಸಿ ಪ್ರೇಕ್ಷರಿಂದ ಚಪ್ಪಾಳೆ ಗಿಟ್ಟಿಸಿದರು.
ಗಾಯನ ಕಾರ್ಯಕ್ರಮ ಯಶಸ್ವಿಗೊಳಿಸಿದ ಸಂಗೀತ ವಿದ್ವಾಂಸರ ವಿದ್ವತ್ ಸಾಧನೆಯನ್ನು ವಿದ್ವಾನ್ ಆರ್.ಕೆ. ಪದ್ಮನಾಭ್ ಶ್ಲಾಘಿಸಿ ಅಭಿನಂದಿಸಿದರು. ಬೆಂಗಳೂರಿನ ಆರಾಧನಾ ಫೌಂಡೇಷನ್‌ನ 60 ಮಕ್ಕಳು ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದರು.