ಜಿಲ್ಲೆ

ಸಂಗೀತಕ್ಕೆ ಶಕ್ತಿಯಾಗಿದ್ದರು ಪುರಾಣಿಕಮಠ

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಸಂಗೀತದ ತವರು. ಅನೇಕ ದಿಗ್ಗಜ ಗಾಯಕರ ಕರ್ಮ ಭೂಮಿ. ಇಂತಹ ನೆಲದಲ್ಲಿ ವ್ಯಕ್ತಿ, ವ್ಯಕ್ತಿತ್ವದಿಂದ ಪರಿಶುದ್ಧರಾಗಿ ಅಪಾರ ಶಿಷ್ಯವಾತ್ಸಲ್ಯ ಮತ್ತು ಸರಳ ಜೀವಿಯಾಗಿದ್ದ ಅಪರೂಪದ ಹಿಂದುಸ್ತಾನಿ ಗಾಯಕ ಪಂ. ಚಂದ್ರಶೇಖರ ಪುರಾಣಿಕಮಠರು ಎಂದು ರಂಗಕರ್ಮಿ ಡಾ. ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ನಗರದ ಪಂ. ಚಂದ್ರಶೇಖರ ಪುರಾಣಿಕಮಠ ಸ್ಮತಿ ಸಂಗೀತ ಸಭಾ ಆಶ್ರಯದಲ್ಲಿ ಸಾಧನಕೇರಿಯ ಗುರುಕೃಪಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪಂ. ಚಂದ್ರಶೇಖರ ಪುರಾಣಿಕಮಠರ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ಪುರಾಣಿಕಮಠ ಗುರುಗಳು ತೀರ ಬಡತನದಲ್ಲಿ ಬೆಳೆದು ಬಂದವರು. ಜಾತಿ, ಮತ, ಪಂಥಗಳನ್ನೆಲ್ಲ ಮೀರಿದ ಅಸಂಖ್ಯ ಶಿಷ್ಯಲೋಕಕ್ಕೆ ಸಂಗೀತಧಾರೆ ಎರೆದ ಈ ವ್ಯಕ್ತಿ ಕೇವಲ ವ್ಯಕ್ತಿಯಾಗಿರದೆ ಸಂಗೀತಕ್ಕೆ ದೊಡ್ಡ ಶಕ್ತಿಯಾಗಿದ್ದರು ಎಂದರು.
ಗಾಯಕ ಪಂ. ಸದಾಶಿವ ಐಹೊಳಿ ಅವರನ್ನು ಸನ್ಮಾನಿಸಲಾಯಿತು. ನಂತರ ಪಂ. ಸದಾಶಿವ ಐಹೊಳಿ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಹಾರ್ಮೋನಿಯಂದಲ್ಲಿ ಡಾ. ಅರ್ಜುನ ವಠಾರ ಸಾಥ್ ನೀಡಿದರು.
ಪಂ.ಬಿ.ಎಸ್. ಮಠ ಅಧ್ಯಕ್ಷತೆ ವಹಿಸಿದ್ದರು. ಶಾಂತಮ್ಮ ಪುರಾಣಿಕಮಠ, ಕುಮಾರಸ್ವಾಮಿ ಪುರಾಣಿಕಮಠ, ಡಾ. ಸೌಭಾಗ್ಯ ಕುಲಕರ್ಣಿ, ವೀರಣ್ಣ ಪತ್ತಾರ, ಡಾ. ಜೆ.ಎಸ್.ಕಾಡದೇವರಮಠ, ಬಸವರಾಜ ಕೆಂಡದಮಠ, ಶಿವಯೋಗಿ ಪುರಾಣಿಕಮಠ, ಎನ್.ಎಸ್. ಹೆಗಡೆ, ಜಿ.ಎಸ್. ಹಿರೇಮಠ, ಮಂಜುನಾಥ ಹೆಗಡೆ, ರಾಮಣ್ಣ ಗೊಜನೂರ, ಸುರೇಶ ಗುದಗನವರ, ವಿ.ಎಲ್.ಪಾಟೀಲ, ಪರಮೇಶ್ವರ ಹೆಗಡೆ, ಕೆ.ವಿ. ಹಾವನೂರ, ವಿರುಪಾಕ್ಷ ದೀಕ್ಷಿತ, ಆರ್.ಬಿ. ಪಾಟೀಲ, ಇತರರು ಇದ್ದರು.
ಎನ್.ಟಿ.ಪರಾಂಜಪೆ ಸ್ವಾಗತಿಸಿದರು. ಡಾ. ಶಾರದಾ ಭಟ್ಟ ನಿರೂಪಿಸಿದರು. ಹೇಮಂತ ಲಮಾಣಿ ವಂದಿಸಿದರು.