ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನೆಹರು ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ರಾಠೋಡ ಅಭಿಪ್ರಾಯಪಟ್ಟರು. ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಸಾಹಿತ್ಯಾವಲೋಕನ ಮತ್ತು ಸಂಗೀತೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತವು ತನ್ನದೆ ಆದ ಗುರುತ್ವಾಕರ್ಷಣ ಶಕ್ತಿ ಹೊಂದಿದೆ. ಎಂತಹ ಕಠೋರ ಮನಸ್ಸಿನವರನ್ನು ಸಹ ತಲೆದೂಗುವಂತೆ ಮಾಡುತ್ತದೆ. ಸಂಗೀತದ ಶಕ್ತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯ ಎಂದರು. ಕಸಾಪದ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕು ಕಸಾಪ ಅಧ್ಯಕ್ಷ ಡಾ. ಶರಣಮ್ಮ ಗೋರೆಬಾಳ, ನಿವೃತ್ತ ಶಿಕ್ಷಕ ಬಿ.ಜಿ. ಬಾರ್ಕಿ, ರಂಗ ಕಲಾವಿದ ಎಸ್.ಎಂ. ದಾನಪ್ಪಗೌಡರ, ಮಾಹಾಬಳೇಶ ಮಾತನಾಡಿದರು. ಕೆ.ಎಚ್. ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂಗೋತೋತ್ಸವದಲ್ಲಿ ಮಹಾನಂದಾ ಗೋಸಾವಿ ಸುಗಮ ಸಂಗೀತ, ಶಿವಾನಂದ ಹೂಗಾರ ತಂಡದಿಂದ ರಂಗಗೀತೆ, ಜಿ.ಟಿ.ದೊಡಮನಿ ಹಾಸ್ಯದೊಂದಿಗೆ ಸಂಗೀತ, ಎಫ್.ಬಿ. ಕಣವಿ, ಎಂ.ಆರ್. ಪಾಲ್ತಿ ತಂಡದಿಂದ ಜಾನಪದ ಸಂಗೀತ, ಪ್ರೇಮಾನಂದ ಶಿಂಧೆ ತಂಡದಿಂದ ದಾಸರ ಪದ ಹಾಗೂ ಸಹನಾ ಶಿಂಧೆ ವಚನ ಪ್ರಸ್ತುತಪಡಿಸಿದರು. ರಾಜ್ಯಮಟ್ಟದಲ್ಲಿ ಭಾವಸಾರ ಸಮಾಜದ ಪ್ರತಿನಿಧಿ ಮತ್ತು ಜಿಲ್ಲಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎಂ.ಎಂ. ದಾಮೋದರ ಹಾಗೂ ಡ್ರಾಮಾ ಜ್ಯೂನಿಯರ್ಸ್ ಕಲಾವಿದ ಚಿರಂತ ಕುಂಬಾರ ಅವರನ್ನು ಸನ್ಮಾನಿಸಲಾಯಿತು.