ರಾಯಚೂರಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಂಗೀತ ತರಬೇತಿ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಗಾಯನ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಮಂಗಳಾ ನಾಯಕ, ಕಲಾವಿದರಾದ ಮಹಾಲಕ್ಷ್ಮಿ, ಸಿದ್ದಪ್ಪ ಬ್ಯಾಳಿಕುಳಿ, ವಿಜಯಕುಮಾರ ದಿನ್ನಿ ಇದ್ದರು. 
ಜಿಲ್ಲೆ

ಸಂಗೀತ ಕಲಿಕೆಗೆ ವಿದ್ಯಾರ್ಥಿಗಳು ಮುಂದಾಗಬೇಕು

ರಾಯಚೂರು: ಸಂಗೀತ ಕಲಿಕೆ ಮತ್ತು ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದ್ದು, ವಿದ್ಯಾರ್ಥಿಗಳು ಸಂಗೀತ ಕಲಿಯಲು ಮುಂದಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಮಂಗಳಾ ನಾಯಕ ಹೇಳಿದರು.
ನಗರದ ದೇವರ ಕಾಲನಿಯಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಗಿರಿಜನ ಉಪಯೋಜನೆಯಡಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂಗೀತ ತರಬೇತಿ ಸಮಾರೋಪ ಸಮಾರಂಭದಲ್ಲಿ ಭಾನುವಾರ ಸಂಜೆ ಮಾತನಾಡಿದರು.
ಕೇವಲ ಐದು ತಿಂಗಳಲ್ಲಿ ವಸತಿನಿಲಯದ ವಿದ್ಯಾರ್ಥಿನಿಯರು ಸಂಗೀತ ಕಲಿತು ವೇದಿಕೆ ಮೇಲೆ ಕಾರ್ಯಕ್ರಮ ನೀಡುವಷ್ಟು ಬೆಳೆದಿರುವುದು ಸಂತಸದ ವಿಷಯವಾಗಿದೆ. ಇದೇ ರೀತಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಗ ರಂಜಿನಿ ಕಲಾ ಬಳಗದ ಅಧ್ಯಕ್ಷೆ ಮಹಾಲಕ್ಷ್ಮಿ, ವಸತಿ ನಿಲಯದ ವಾರ್ಡನ್ ಮಂಜುಳಾ ಅವಧೂತ್, ಕಲಾವಿದರಾದ ಸಿದ್ದಪ್ಪ ಬ್ಯಾಳಿಕುಳಿ, ವಿಜಯಕುಮಾರ ದಿನ್ನಿ, ಆದಿತ್ಯ ನಾಯಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.