ಚಿಕ್ಕಬಳ್ಳಾಪುರ: ಮುಂಬರುವ ಸಂಕ್ರಾಂತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಳ್ಳಾಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.ತಾಲೂಕಿನ ಆರೂರಿನಲ್ಲಿ ನಿರ್ಮಾಣವಾಗುತ್ತಿರುವ ನೂತನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ಕಾಮಗಾರಿಗಳ ಪ್ರಗತಿಯನ್ನು ಶನಿವಾರ ಪರಿಶೀಲಿಸಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣದಿಂದ ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಕೋಲಾರ, ಬೆಂ. ಗ್ರಾಮಾಂತರ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ.ಈಗಾಗಲೇ ಕಟ್ಟಡ ಕಾಮಗಾರಿ ಕೆಲಸ ಶೇ.75 ಮುಗಿದಿದೆ ಎಂದರು.
ವೈದ್ಯಕೀಯ ಕಾಲೇಜಿಗೆ ಅಧ್ಯಾಪಕರನ್ನು ನೇಮಿಸಲಾಗಿದೆ. 2021-22ನೇ ಸಾಲಿನಲ್ಲಿ 100 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ, ನೇಮಕಾತಿ ಕಡತ ಕಳುಹಿಸಿಕೊಡಲಾಗಿದ್ದು, ಎರಡು ದಿನದಲ್ಲಿ ದಾಖಲಾತಿ ಪ್ರಾರಂಭವಾಗಲಿದೆ. ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಕಲಿಕೆಗೆ ತಾತ್ಕಾಲಿಕ ವ್ಯವಸ್ಥೆ ಒದಗಿಸಲಾಗಿದೆ ಎಂದರು.
ಈ ಭಾಗದ ಜನರು ದ್ವಿತೀಯ, ತೃತೀಯ ಹಂತದ ಚಿಕಿತ್ಸೆಗೆ ಸೌಲಭ್ಯವಿಲ್ಲದೆ ಏನೇ ಆಪತ್ತು ಬಂದರೂ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇದೆ. ಇದನ್ನು ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ತಪ್ಪಿಸಲಿದೆ ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮತ್ತಿತರರು ಇದ್ದರು.
ಡಿಸೆಂಬರ್ ಅಂತ್ಯದೊಳಗೆ ಪೂರ್ಣ: ಚಿಕ್ಕಬಳ್ಳಾಪುರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅನೇಕ ಕೋರ್ಸ್‌ಗಳು ತಲೆ ಎತ್ತಲಿದ್ದು, ಈ ಭಾಗದ ಸುತ್ತಮುತ್ತಲಿನ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದಕ್ಕೆ ತ್ವರಿತವಾಗಿ ವೈದ್ಯಕೀಯ ಕಾಲೇಜು ಆರಂಭಿಸಲು ನೂತನ ಕಟ್ಟಡದ ಕಾಮಗಾರಿ ಮುಗಿಯಬೇಕಾಗಿದೆ. ಇದರ ಬಗ್ಗೆ ಪ್ರತಿ ತಿಂಗಳು ವರದಿ ಪಡೆದುಕೊಳ್ಳಲಿದ್ದು, ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಮನಗರ, ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು: ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕ್ಯಾಬಿನೆಟ್‌ನಲ್ಲಿ ನಿರ್ಧರಿಸಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ. ರಾಮನಗರದಲ್ಲಿ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ವತಿಯಿಂದ ವಿವಿಯ ಆಡಳಿತ ಕೇಂದ್ರದ ಜತೆಗೆ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೇರಳ, ತಮಿಳುನಾಡು, ಉತ್ತರ ಭಾರತ ರಾಜ್ಯಗಳ ವಿದ್ಯಾರ್ಥಿಗಳು ಮತ್ತು ಕರ್ನಾಟಕದ ಕೊಡಗು, ದಕ್ಷಿಣ ಕನ್ನಡದ ಭಾಗದವರು ಮಾತ್ರ ಹೆಚ್ಚು ವೈದ್ಯಕೀಯ ಕ್ಷೇತ್ರಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ, ಉಳಿದ ಕಡೆ ಹೆಚ್ಚಿನ ಆಸಕ್ತಿ ಕಂಡು ಬರುತ್ತಿಲ್ಲ. ಇದಕ್ಕೆ ಅರಿವು ಮೂಡಿಸಲಾಗುವುದು. 10 ಜಿಲ್ಲೆಗಳಲ್ಲಿ ಖಾಸಗಿ ಸಹ ಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಅಭಿವೃದ್ಧಿಪಡಿಸುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದರು.