ಜಿಲ್ಲೆ

ಸಂಕ್ರಾಂತಿ ಸಂಭ್ರಮಕ್ಕೆ ಕೋಟೆನಾಡು ಸಜ್ಜು

ಚಿತ್ರದುರ್ಗ: ‘ಎಳ್ಳು-ಬೆಲ್ಲ ಹಂಚಿ’ ಸಂಭ್ರಮದಿಂದ ಆಚರಿಸುವ, ‘ಸ್ನೇಹ-ಬಾಂಧವ್ಯದ’ ಸಂದೇಶ ಸಾರುವ ಸಂಕ್ರಾಂತಿಯನ್ನು ಬರಮಾಡಿಕೊಳ್ಳಲು ಕೋಟೆನಾಡಿನ ಜನ ಒಂದು ದಿನ ಮುನ್ನವೇ ಖರೀದಿ ಭರಾಟೆಯಲ್ಲಿ ನಿರತರಾಗಿದ್ದರು. ಹೀಗಾಗಿ ಭಾನುವಾರ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂದಿತು.

ಕ್ಯಾಲೆಂಡರ್ ವರ್ಷಾರಂಭದ ಮೊದಲ ಹಬ್ಬ ಇದಾಗಿದ್ದು, ಈಗಾಗಲೇ ನಗರದ ಮಾರುಕಟ್ಟೆಗಳಿಗೆ ರಾಶಿ-ರಾಶಿ ಕಬ್ಬು, ಕುಂಬಳಕಾಯಿ, ಗೆಣಸು, ಕಡಲೆಕಾಯಿ, ಅವರೆಕಾಯಿ ಆಮದಾಗಿದೆ. ಅಂಗಡಿ ಮಳಿಗೆಗಳಲ್ಲಿ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು ಮಾರಾಟ ಜೋರಾಗಿದೆ. ಬಿ.ಡಿ.ರಸ್ತೆ, ಸಂತೆಹೊಂಡ, ಮೆದೇಹಳ್ಳಿ ರಸ್ತೆ, ಆನೆಬಾಗಿಲು, ಎಪಿಎಂಸಿಯ ಹೂವಿನ ಮಾರುಕಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರ ಅಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಜನರು ಸಾಮಗ್ರಿಗಳ ಖರೀದಿಸಲು ಹಲವೆಡೆ ಮುಗಿ ಬಿದ್ದಿದ್ದರು.

ಕಳೆದೆರಡು ದಿನಗಳಿಂದ ಸಂತೆಹೊಂಡ ಮಾರುಕಟ್ಟೆ ಬಳಿ ಐದಾರು ಲೋಡ್ ಕಬ್ಬು ಮಂಡ್ಯ, ಹಾಸನ, ಕುರುಬರಹಳ್ಳಿ ಸೇರಿ ಇತರೆಡೆಗಳಿಂದ ಆಮದಾಗುತ್ತಿದೆ. ವಿವಿಧೆಡೆಯ ಕುಂಬಳಕಾಯಿ ಕೂಡ ಇದಕ್ಕೆ ಹೊರತಾಗಿಲ್ಲ. ಗುಣಮಟ್ಟಕ್ಕೆ ತಕ್ಕಂತೆ ಪ್ರತಿ ಜಲ್ಲೆ 40ರಿಂದ 50 ರೂ.ವರೆಗೆ, ಪ್ರತಿ ಕೆ.ಜಿ.ಗೆ ಕಡಲೆಕಾಯಿ 100ರಿಂದ 120 ರೂ., ಅವರೆಕಾಯಿ 90-100 ರೂ., ಸೇಬು 120-180 ರೂ., ದಾಕ್ಷಿ 120 ರೂ., ಕಿತ್ತಳೆ 80 ರೂ., ದಾಳಿಂಬೆ 140-180, ಕುಂಬಳಕಾಯಿ 40 ರೂ., ಬಾಳೆಹಣ್ಣು 60-80 ರೂ.ನಂತೆ ಮಾರಾಟವಾದವು.

ಸಂಕ್ರಾಂತಿ ಹಬ್ಬದಲ್ಲಿ ಸಂಬಂಧಿಕರಿಗೆ, ನೆರೆ ಹೊರೆಯವರಿಗೆ, ಸ್ನೇಹಿತರಿಗೆ ಎಳ್ಳು-ಬೆಲ್ಲ ಹಂಚುವ ಪದ್ಧತಿ ಇದೆ. ಹೀಗಾಗಿ ಸಿದ್ಧ ಎಳ್ಳು-ಬೆಲ್ಲಕ್ಕೆ ಬೇಡಿಕೆ ಹೆಚ್ಚಿತ್ತು. ಪ್ರತಿ ಕೆ.ಜಿ.ಗೆ 200-280 ರೂ.ನಂತೆ ಮಾರಾಟವಾದವು. ಮನೆಗಳಲ್ಲಿ ತಯಾರಿಸಿಕೊಳ್ಳುವವರು ಅಗತ್ಯ ವಸ್ತುಗಳನ್ನು ಪ್ರತ್ಯೇಕವಾಗಿ ಖರೀದಿಸಲು ಮುಂದಾದರು. ಇದರ ಜತೆಗೆ ವರ್ಣಮಯ ಸಕ್ಕರೆ ಅಚ್ಚು ಗ್ರಾಹಕರನ್ನು ಆಕರ್ಷಿಸಿದವು.

ಮಡಕೆಗೆ ಬೇಡಿಕೆ: ಗ್ರಾಮೀಣ ಸೊಗಡಿನ ಸಂಕ್ರಾಂತಿ ನಗರದಲ್ಲಿಯೂ ತನ್ನ ಹಿಂದಿನ ಸಂಪ್ರದಾಯ ಉಳಿಸಿಕೊಂಡು ಬಂದಿದೆ. ಹೀಗಾಗಿ ಹಿಂದಿನಂತೆಯೇ ಈ ಹಬ್ಬದಲ್ಲೂ ಹೊಸ ಮಡಕೆ ಖರೀದಿಸಿ ಒಲೆ ಹಚ್ಚಿ ಪೊಂಗಲ್ ತಯಾರಿಸುತ್ತಾರೆ. ಇದರಿಂದಾಗಿ ಮಡಕೆಗಳಿಗೂ ಮಾರುಕಟ್ಟೆಯಲ್ಲಿ ಕೊಂಚ ಬೇಡಿಕೆ ಕಂಡುಬಂತು. ಇದರ ಜತೆಗೆ ರಾಸುಗಳನ್ನು ಸಿಂಗರಿಸಲು ವಿವಿಧ ವಸ್ತುಗಳನ್ನು ಖರೀದಿಸಲು ರೈತರು ಮುಂದಾದರು.

ಪುಷ್ಪಗಳ ದರ ಏರಿಕೆ: ಪ್ರತಿ ಹಬ್ಬದಲ್ಲಿಯೂ ಸಾಮಾನ್ಯವಾಗಿ ಪುಷ್ಪಗಳ ದರ ಏರಿಕೆ ಆಗುತ್ತದೆ. ಅಲ್ಲದೆ, ಸಂಕ್ರಾಂತಿ ಹಬ್ಬದಲ್ಲಿ ಹಲವು ದೇಗುಲಗಳಲ್ಲಿ ವಿಶೇಷ ಅಲಂಕಾರ ಸೇವೆ ನೆರವೇರಿಸುವ ಕಾರಣ ಹೂವಿಗೆ ಬೇಡಿಕೆ ಜತೆ ದರ ಏರಿಕೆ ಕೂಡ ಕಂಡುಬಂದಿತು.

ಎಪಿಎಂಸಿ ಸಗಟು ಹೂವಿನ ಮಾರುಕಟ್ಟೆಯಲ್ಲಿ ಎಲ್ಲಾ ವರ್ಣದ ಗುಣಮಟ್ಟದ ಸೇವಂತಿ 12-15 ಮಾರಿಗೆ ತಲಾ 1ಸಾವಿರ ರೂ., ಕನಕಾಂಬರ 10 ಮಾರಿಗೆ 1ಸಾವಿರ ರೂ., ಬಟನ್ಸ್ ಕೆ.ಜಿ.ಗೆ 200-300 ರೂ., ಖಾಸಗಿ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿ ದೊಡ್ಡ ಹಾರಗಳನ್ನು 1 ಸಾವಿರದಿಂದ 10 ಸಾವಿರ ರೂ.ವರೆಗೂ ಅಳತೆ ಮತ್ತು ಗಾತ್ರಕ್ಕೆ ತಕ್ಕಂತೆ ತಯಾರಿಸಲಾಗಿತ್ತು.