ಚಿತ್ರದುರ್ಗ: ಹಿಂದಿನ ಕಾಲದಲ್ಲಿ ಮನೆ ಸಣ್ಣದಿದ್ದರೂ ಮನಸ್ಸು ದೊಡ್ಡದಾಗಿರುತ್ತಿತ್ತು. ಸಂಸಾರದಲ್ಲಿ ನೆಮ್ಮದಿ ಇತ್ತು. ಆದರೆ ಇಂದು ಮನೆ,ಮಹಲುಗಳ ಎತ್ತರ ಕ್ಕೇರುತ್ತಿದ್ದರೂ ಸಂಕುಚಿತ ಮನಸ್ಸುಗಳಿಂದಾಗಿ ಸಂಬಂಧಗಳಲ್ಲಿ ಗಟ್ಟಿತನ ಇಲ್ಲವಾಗುತ್ತಿದೆ ಎಂದು ಮುರುಘಾ ಮಠದ ಉಸ್ತುವಾರಿ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ನಡೆದ 33ನೇ ವರ್ಷದ 12ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸತಿಪತಿಗಳ ನಡುವೆ ಹೊಂದಾಣಿಕೆ ಬಹುಮುಖ್ಯ. ಹೊಂದಾಣಿಕೆಯಿದ್ದರೆ ಬದುಕು ಸ್ವರ್ಗವಾಗಲಿದೆ. ಸಾಮರಸ್ಯದಿಂದ ವಿಶ್ವವನ್ನು ಗೆಲ್ಲಬಹುದು.
ಅತ್ತೆ, ಸೊಸೆ ಮಧ್ಯೆ ತಾಯಿ-ಮಗಳ ಸಂಬಂಧವಿರಬೇಕು. ಸಹನೆ ಮುಖ್ಯ, ಸಹನೆ ಸಂಕೇತವೇ ತಾಳಿ. ರೂಪ ಮತ್ತು ರೂಪಾಯಿ ಶಾಶ್ವತವಲ್ಲ. ಪ್ರೀತಿ, ಪ್ರಾಮಾಣಿಕತೆ ಮತ್ತು ಒಳ್ಳೆಯ ಗುಣಗಳು ಶಾಶ್ವತವೆಂದರು.
ಬೆಂಗಳೂರು ಭಾರತೀಯ ಭಾವೈಕ್ಯ ಗುರುಪೀಠದ ಶ್ರೀ ಸಂಗಮನಾಥ ಸ್ವಾಮೀಜಿ ಮಾತನಾಡಿ, ಮದುವೆ ಎಂಬುದು, ಸಂಬಂಧಗಳನ್ನು ಕೂಡಿ ಸುವ ಕಾರ್ಯಕ್ಷೇತ್ರ. ಸಂಸಾರ ಎನ್ನುವುದು ಬಂಡಿ ಗಾಲಿಗಳಿದ್ದಂತೆ. ಅವರೆಡೂ ಸಮಾನವಾಗಿ ಸಾಗ ಬೇಕು. ಇವತ್ತಿನ ವಿದ್ಯಾವಂತರಲ್ಲಿ ಹೊಂ ದಾಣಿಕೆ ಕೊರತೆ ಕಂಡುಬರುತ್ತಿದೆ. ಗುರುಹಿರಿಯರ ಬಗ್ಗೆ ಗೌರವ ಅಭಿಮಾನ ಬೆಳೆಸಿಕೊಳ್ಳಬೇಕೆಂದರು.
ಸಿರಗುಪ್ಪ ಶ್ರೀಗುರುಬಸವ ಮಠ ಬಸವ ಕೇಂದ್ರದ ಶ್ರೀ ಬಸವಭೂಷಣ ಸ್ವಾಮೀಜಿ ಮಾತನಾಡಿ, ನವ ದಂಪತಿಗೆ ಉತ್ತಮ ಸಂಸ್ಕಾರ ಕೊಡುವ ಕೆಲಸ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ನಡೆಯುತ್ತಿದೆ. ವಿಭೂತಿ, ರುದ್ರಾಕ್ಷಿಧಾರಣೆ ಬಸವ ಸಂಸ್ಕೃತಿ ಪ್ರತೀಕವಾಗಿದೆ ಎಂದರು.
9 ಜೋಡಿಗಳ ವಿವಾಹ ನೆರವೇರಿತು. ಶ್ರೀ ಮುರುಘೇಂದ್ರ ಸ್ವಾಮೀಜಿ, ಪೈಲ್ವಾನ್‌ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆ ಗಾಯನ ನಡೆಸಿಕೊಟ್ಟರು. ಜಮುರಾ ಕಲಾಲೋಕದ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿ, ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.