ರಾಣೆಬೆನ್ನೂರ: ಕರೊನಾ ಒಂದನೇ ಅಲೆಯಿಂದ ಕಳೆದ ವರ್ಷ ಆರ್ಥಿಕ ಸಂಕಷ್ಟ ಎದುರಿಸಿದ್ದ ಗಣಪತಿ ಮೂರ್ತಿ ತಯಾರಕರು, ಎರಡು ಮತ್ತು ಮೂರನೇ ಅಲೆಯ ಭೀತಿಯಲ್ಲಿದ್ದಾರೆ.
ಎರಡು ವರ್ಷಗಳಿಂದ ನಿರೀಕ್ಷಿತ ಆದಾಯವಿಲ್ಲ. ವಿಘ್ನ ನಿವಾರಕನ ಮೂರ್ತಿ ತಯಾರಿಕೆ ನಂಬಿಕೊಂಡಿರುವವರು ಸಂಕಷ್ಟ ಎದುರಿಸುವಂ ತಾಗಿದೆ. ಗಣೇಶ ಚತುರ್ಥಿ ಇನ್ನೂ ಎರಡು ತಿಂಗಳಿರುವಾಗಲೇ ಮೂರ್ತಿ ತಯಾರಕರ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಕುಟುಂಬದ ಸದಸ್ಯರೆಲ್ಲರೂ ಸೇರಿ ನಿರಂತರವಾಗಿ ಕೆಲಸ ಮಾಡಿದರೂ ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಿಸಿ ಕೊಡುವುದು ಕಷ್ಟವಾಗುತ್ತಿತ್ತು. ಆದರೆ, ಕರೊನಾ ಮೊದಲ ಹಾಗೂ ಎರಡನೇ ಅಲೆ ಮೂರ್ತಿಕಾರರನ್ನು ಸಂಕಷ್ಟಕ್ಕೆ ನೂಕಿದೆ.
ಮೂರ್ತಿ ತಯಾರಕರು ಈ ವರ್ಷವಾದರೂ ದೊಡ್ಡ ಮೂರ್ತಿಗಳಿಗಾಗಿ ಬೇಡಿಕೆ ಬರಲಿದೆ ಎಂದುಕೊಂಡಿದ್ದರು. ಆದರೆ, ಕರೊನಾ ಮೂರನೇ ಅಲೆ ಬರುವ ಮಾಹಿತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಸಂಘಟಕರು ಈವರೆಗೂ ದೊಡ್ಡ ಮೂರ್ತಿಗಾಗಿ ಬೇಡಿಕೆ ಇಟ್ಟಿಲ್ಲ.
ನಗರದ ಕುರುಬಗೇರಿ, ಮಾರುತಿ ನಗರ, ಕುಂಬಾರ ಓಣಿಯಲ್ಲಿ ಗಣಪತಿ ತಯಾರಿಸುವ ಕುಟುಂಬಗಳಿವೆ. ಅಲ್ಲಿಯೂ ನೀರವ ಮೌನವಿದೆ. ಕೆರೆಗಳಿಂದ ಮಣ್ಣು ತಂದು ಮೂರ್ತಿ ತಯಾರಿಸುತ್ತಿದ್ದ ಇವರು ಮಣ್ಣು ತರುವ ಗೋಜಿಗೆ ಹೋಗಿಲ್ಲ. ಅಗತ್ಯವಿರುವ ಕಚ್ಚಾ ವಸ್ತುಗಳನ್ನು ತರಿಸಿಕೊಂಡಿಲ್ಲ. ಕುರುಬಗೇರಿಯಲ್ಲಿರುವ ಕಲಾವಿದರು, ಮನೆಗಳಲ್ಲಿ ಪ್ರತಿಷ್ಠಾಪಿಸುವ ಚಿಕ್ಕಪುಟ್ಟ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇವುಗಳಿಗೂ ಯಾರಿಂದಲೂ ಬೇಡಿಕೆಯಿಲ್ಲ. ಕೊನೆಯ ಗಳಿಗೆಯಲ್ಲಾದರೂ ಮನೆಯಲ್ಲಿ ಪ್ರತಿಷ್ಠಾಪಿಸುವುದಕ್ಕೆ ಬೇಡಿಕೆ ಬರಬಹುದು ಎಂಬ ಆಶಯದೊಂದಿಗೆ ಮೂರ್ತಿ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಕಲಾವಿದರು. ಕರೊನಾ ಮೂರನೇ ಅಲೆ ಭೀತಿ ಎಲ್ಲರಲ್ಲೂ ಮನೆ ಮಾಡಿದ್ದು, ಹಬ್ಬದ ಸಮಯಕ್ಕೆ ಸರ್ಕಾರದಿಂದ ಯಾವ ರೀತಿಯ ಮಾರ್ಗಸೂಚಿಗಳು ಹೊರಬರುತ್ತವೋ ಗೊತ್ತಿಲ್ಲ. ಮೂರ್ತಿಪ್ರತಿಷ್ಠಾಪನೆಗೆ ಅವಕಾಶ ನೀಡುತ್ತಾರೋ, ಇಲ್ಲವೋ ಎಂಬ ಗೊಂದಲವಿದೆ.
ಆದಾಯಕ್ಕೆ ಕೊಡಲಿ ಪೆಟ್ಟು
ಗಣಪತಿ ಮೂರ್ತಿ ತಯಾರಿಕೆಯನ್ನೇ ನಂಬಿಕೊಂಡ 25ಕ್ಕೂ ಅಧಿಕ ಕುಟುಂಬಗಳು ನಗರದಲ್ಲಿವೆ. ಆದರೆ, ಕರೊನಾ 1ನೇ ಅಲೆಯಿಂದ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಗಣಪತಿ ಹಬ್ಬದಲ್ಲಿ ಎರಡ್ಮೂರು ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಎರಡು ವರ್ಷದಿಂದ ಈ ಆದಾಯ ಒಂದು ಲಕ್ಷ ರೂಪಾಯಿ ಒಳಗೆ ಇಳಿದಿದೆ. ಕಳೆದ ವರ್ಷವೂ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಈ ಬಾರಿಯೂ ನಯಾಪೈಸೆ ಕೊಡಲಿಲ್ಲ. ಬದುಕು ನಡೆಸಲು ಕೂಲಿ ಮಾಡುತ್ತಿದ್ದೇವೆ. ಆದ್ದರಿಂದ ಸರ್ಕಾರ ನಮಗೂ ಸೂಕ್ತ ಪರಿಹಾರ ನೀಡಬೇಕು ಎಂಬುದು ಕಲಾವಿದರ ಒತ್ತಾಯವಾಗಿದೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವ ರೀತಿ ಆದೇಶ ಬರಲಿದೆ ಎಂಬ ಕುರಿತು ಗೊಂದಲವಿದೆ. ಇದರಿಂದಾಗಿ ಗಣಪತಿ ಮೂರ್ತಿ ತಯಾರಿಸಲು ಭಯವಾಗುತ್ತಿದೆ. ಆದ್ದರಿಂದ ಸರ್ಕಾರ ಗಣೇಶ ಚತುರ್ಥಿ ಒಂದು ವಾರ ಇದ್ದಾಗ ಆದೇಶ ಹೊರಡಿಸುವ ಬದಲು ಈಗಲೇ ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೆ ಮಾರ್ಗಸೂಚಿ ಹೊರಡಿಸಬೇಕು. ಅಂದಾಗ ನಮಗೂ ಮೂರ್ತಿ ತಯಾರಿಕೆಗೆ ಅನುಕೂಲವಾಗಲಿದೆ. ಜತೆಗೆ ಮೂರ್ತಿ ತಯಾರಕರ ಕುಟುಂಬಕ್ಕೂ ಸರ್ಕಾರ ಧನಸಹಾಯ ನೀಡಬೇಕು. | ರಾಘವೇಂದ್ರ ತ್ರಾಸದ, ಗಣಪತಿ ಮೂರ್ತಿ ತಯಾರಕ, ರಾಣೆಬೆನ್ನೂರಗಣೇಶ ಚತುರ್ಥಿ ಆಚರಣೆ ಕುರಿತು ಸರ್ಕಾರದಿಂದ ಈವರೆಗೂ ಯಾವುದೇ ಮಾರ್ಗಸೂಚಿ ಬಂದಿಲ್ಲ. ಕಲಾವಿದರ ಸಮಸ್ಯೆ ಕುರಿತು ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು.| ಶಂಕರ ಜಿ.ಎಸ್. ತಹಸೀಲ್ದಾರ್