ಆನೇಕಲ್: ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು. ತದನಂತರ ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಶ್ರಮವಹಿಸಬೇಕು. ಆದರೆ ಕಾಂಗ್ರೆಸ್ ಮುಖಂಡರು ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಹೇಳಿದರು.
ಮೈತ್ರಾದೇವಿ ಯಡಿಯೂರಪ್ಪ ಸೇವಾ ತಂಡದಿಂದ ಆನೇಕಲ್ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಆಕ್ಸಿಜನ್ ಆಂಬುಲೆನ್ಸ್ ಸೇವೆಗೆ ಪಟ್ಟಣದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಕರೊನಾದಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದರೆ ಕಾಂಗ್ರೆಸ್ ನಾಯಕರು ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ತಾಲೂಕಿನ ತಿಂಡ್ಲು ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಬೇಕೆಂದು ಮೊದಲು ಧ್ವನಿ ಎತ್ತಿದ್ದೆ ನಾನು. ಅದಕ್ಕೆ ಜಿಲ್ಲಾಧಿಕಾರಿಗಳ ಬಳಿ ಗೆಜೆಟ್ ನೋಟಿಫಿಕೇಷನ್ ಮಾಡಿಸಲಾಗಿತ್ತು. ನಂತರ ಕಟ್ಟಡದ ಸಂಬಂಧಪಟ್ಟ ಮಠಾಧೀಶರ ಬಳಿ ನಾನೇ ಚರ್ಚೆ ನಡೆಸಿ ಅವರ ಮನವೊಲಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್‌ನವರು ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಬೇಸರಿಸಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಯಂಗಾರೆಡ್ಡಿ ಮಾತನಾಡಿ, ಚಿತ್ರದುರ್ಗ ಸಂಸದರು ಆನೇಕಲ್‌ನಲ್ಲಿ ಹುಟ್ಟಿಬೆಳೆದವರು, ಅವರು ಇಲ್ಲಿಗೆ ಬರಲು ಯಾರ ಅನುಮತಿ ಕೇಳಬೇಕಾಗಿಲ್ಲ. ಚಿತ್ರದುರ್ಗ ಮತ್ತು ಆನೇಕಲ್ ತಾಲೂಕಿನ ಜನತೆಗೆ ತೊಂದರೆ ಆಗದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪುರಸಭಾ ಸದಸ್ಯ ಶ್ರೀಕಾಂತ್, ತಾಲೂಕು ಆರೋಗ್ಯಾಧಿಕಾರಿ ವಿನಯ್, ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ನಳಿನಿ, ಮುಖಂಡರಾದ ಬಾಬು, ಮುನಿರಾಜು, ರಾಕೇಶ್, ಯುವ ಮೋರ್ಚಾ ಅಧ್ಯಕ್ಷ ರಘು, ಆನೇಕಲ್ ಮಂಡಲ ಕಾರ್ಯದರ್ಶಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.